ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಸಂಘಟನೆ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆಯನ್ನು ಇದೇ ಜುಲೈ 29ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿರುವ ಅವರು, ಕಳೆದ ತಿಂಗಳು ಕೇಂದ್ರ ಸರ್ಕಾರದ ರಾಜ್ಯ ಕಾರ್ಮಿಕ ಖಾತೆ ಸಚಿವೆಯವರಾದ ಶೋಭಾ ಕರಂದ್ಲಾಜೆ ಅವರನ್ನು ನಾವೆಲ್ಲರೂ ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಇಪಿಎಸ್ ನಿವೃತ್ತರ ಸಂಕಷ್ಟಗಳನ್ನು ವಿವರಿಸಿ, ಮನವಿ ಪತ್ರ ಸಲ್ಲಿಸಿದ್ದರೂ ಕೂಡ ಜು.25ರಂದು ಪಾರ್ಲಿಮೆಂಟ್ ಅಧಿವೇಶನದ ಪ್ರಶ್ನೋತ್ತರ (questionare) ಕಲಾಪದಲ್ಲಿ ಭಾಗವಹಿಸಿ ನಿವೃತ್ತರಿಗೆ ಯಾವುದೇ ಸೌಲಭ್ಯ ಇಲ್ಲ ಎಂದು ಸಚಿವೆಯವರು ಹೇಳಿರುವುದು, ನಮಗೆಲ್ಲರಿಗೂ ಬೇಸರ ಮೂಡಿಸಿದೆ.
ಪ್ರತಿ 10 ವರ್ಷಗಳಿಗೊಮ್ಮೆ ಇಪಿಎಸ್ ನಿವೃತ್ತರಿಗೆ ಪಿಂಚಣಿ ಸೌಲಭ್ಯ ವಿಸ್ತರಿಸಬೇಕೆಂದು ಇಪಿಎಸ್ ಪಿಂಚಣಿ ಯೋಜನೆಯನ್ನು ರೂಪಿಸಿದ್ದು, 2014ರಲ್ಲಿ ಕನಿಷ್ಠ ಪಿಂಚಣಿ ಒಂದು ಸಾವಿರ ನಿಗದಿಪಡಿಸಿದ ನಂತರ ಈ ವರವಿಗೂ ಯಾವುದೇ ಮಾರ್ಪಾಡು ಮಾಡದೆ ಇರುವುದು ಅತ್ಯಂತ ದುರಂತದ ಸಂಗತಿ.
ಇನ್ನು ಆಗಸ್ಟ್ 12ರವರೆಗೆ ಪಾರ್ಲಿಮೆಂಟ್ ಅಧಿವೇಶನ ನಡೆಯಲಿದ್ದು, ಇದಾದ ನಂತರ ಆಗಸ್ಟ್ ಮೂರನೇ ವಾರದಲ್ಲಿ ಹೊಸ ಸರ್ಕಾರದ ಸಿಬಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಇಪಿಎಸ್ ನಿವೃತ್ತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಮಂಡಿಸುವಂತೆ ನಮ್ಮ ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಅವರ ಮೇಲೆ ಒತ್ತಡ ಹಾಕಲು ನಿರ್ಧರಿಸಿದ್ದು, ಈ ಬಗ್ಗೆ ಮನವಿ ಪತ್ರವನ್ನು ಸಿದ್ಧಪಡಿಸಲಾಗಿದೆ.
ಇನ್ನು ಮುಂಬರುವ ಸಿಬಿಟಿ ಸಭೆಯಲ್ಲಿ ಆಧ್ಯತೆಯ ಮೇರೆಗೆ ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಅಂದರೆ 7,500 ರೂ.ಗಳು + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಈಡೇರಿಸಿ ಕೊಡಬೇಕೆಂದು ಒತ್ತಾಯಿಸಲು ಈ ನಮ್ಮ ಪ್ರತಿಭಟನೆ ಅನಿವಾರ್ಯವಾಗಿದೆ.
ಹೀಗಾಗಿ ಇಪಿಎಫ್ಒ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ಜುಲೈ 29 ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದುಕೊರತೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಆದರೆ, ನವೆಂಬರ್ 04, 2022 ರಂದು ಸರ್ವೋಚ್ಚ ನ್ಯಾಯಾಲಯವು ಇಪಿಎಸ್ ನಿವೃತ್ತರ ಪರ ನೀಡಿರುವ ತೀರ್ಪನ್ನು ಇನ್ನೂ ಏಕೆ? ಅನುಷ್ಠಾನಗೊಳಿಸಿಲ್ಲ!!!. ಮೇ 31ರ ಒಳಗೆ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಅವರೇ ನಿಗದಿಪಡಿಸಿದ್ದ, ಗಡುವು ಏನಾಯಿತು?. ಈ ಎಲ್ಲ ಪ್ರಶ್ನೆಗಳಿಗೆ ಇಪಿಎಫ್ಒ ಅಧಿಕಾರಿಗಳು ಉತ್ತರಿಸಬೇಕಿದೆ. ಏನೇ ಆಗಲಿ ಗುರಿ ಮುಟ್ಟುವ ವಿಶ್ವಾಸವಿದೆ. ಎಲ್ಲ ನಿವೃತ್ತರು ಎಚ್ಚೆತ್ತುಕೊಂಡು, ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.
ಇನ್ನು ನಾಳೆಯಿಂದ ಅಂದರೆ ಜುಲೈ 29 ರಿಂದ 31ರವರೆಗೆ ನವದೆಹಲಿಯಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಕಾರ್ಯಕಾರಿ ಸಮಿತಿ ಸಭೆ, ಜಂತರ್ ಮಂತರ್‌ನಲ್ಲಿ ಇಪಿಎಸ್ ನಿವೃತ್ತರ ಪ್ರತಿಭಟನಾ ಸಭೆ ಹಾಗೂ ಕೇಂದ್ರ ಸರ್ಕಾರದ ಮುಖಂಡರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಭೆಗೆ ನಮ್ಮ ರಾಜ್ಯದಿಂದ ರಮಾಕಾಂತ್ ನರಗುಂದರವರ ನೇತೃತ್ವದಲ್ಲಿ 15 ಮುಖಂಡರ ನಿಯೋಗದೊಂದಿಗೆ ಭಾಗವಹಿಸಲಿದೆ.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಜುಲೈ 29 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಕೋರಿದ್ದಾರೆ.
