ಹಾಸನ: ಜಿಲ್ಲೆಯಲ್ಲಿ ಸತತವಾಗಿ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮನೆಯಿಂದ ಹೊರಬರುವುದಕ್ಕೂ ಪರದಾಡುತ್ತಿದ್ದಾರೆ.
ಈ ಭಾರೀ ಮಳೆಯಿಂದ ಎಲ್ಲಿ ನೋಡಿದರೂ ಭೂಕುಸಿತ, ಪ್ರವಾಹದಂತೆ ಹರಿಯುತ್ತಿರುವ ನೀರು, ಮನೆಗಳಿಗೆ ಹಾನಿ, ರೈತರ ಫಸಲು ನಾಶಮಾಡಿದೆ. ಇತ್ತ ಹೇಮಾವತಿ ನದಿ ಪ್ರವಾಹದಿಂದ ತಗ್ಗು ಪ್ರದೇಶದ ಜನರು ಭಾರೀ ಸಂಕಷ್ಟ ಅನುಭವಿಸುವ ಸ್ಥಿತಿ ಕೂಡ ನಿರ್ಮಾಣವಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಭಾರೀ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದು, ಸಕಲೇಶಪುರದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ. ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ತೀವ್ರವಾಗಿ ಪರದಾಡುತ್ತಿದ್ದಾರೆ.
ಇನ್ನು ಹೇಮಾವತಿ ನದಿಯ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವು ಹೆಚ್ಚಾಗಿದೆ. ಹೀಗಾಗಿ ಹೊಳೆನರಸೀಪುರ ಹಾಗೂ ಸಕಲೇಶಪುರದ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಪ್ರಮುಖ ರಸ್ತೆಗಳಂತೂ ಹೊಳೆಯಂತಾಗಿವೆ.
ಇನ್ನೊಂದೆಡೆ ಹೇಮಾವತಿ ನದಿಯ ನೀರು ಬಡಾವಣೆಗಳಿಗೂ ನುಗ್ಗಿದ್ದು, ಹಲವು ಬಡಾವಣೆಗಳು ಸಂಪೂರ್ಣ ಮುಳುಗಡೆಯಾಗಿವೆ. ಸಕಲೇಶಪುರದಲ್ಲಿ ಎಲ್ಲಿ ನೋಡಿದರೂ ಹೇಮಾವತಿ ನದಿಯ ನೀರು ಕಾಣುತ್ತಿದ್ದು, ಅಗತ್ಯ ವಸ್ತುಗಳನ್ನು ಕೊಳ್ಳಲು ಸಹ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.