ಮೈಸೂರು: ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಸಂಭ್ರಮ ಮನೆಮಾಡಿದ್ದು, ಚಾಮುಂಡಿಬೆಟ್ಟಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ, ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಜನ್ಮದಿನವನ್ನು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳೊಂದಿಗೆ ದೇವಿಯ ಮೆರವಣಿಗೆಯನ್ನು ಮಾಡಲಾಯಿತು.
ಇಡೀ ಮೈಸೂರು ನಗರವು ತಮ್ಮ ಆರಾಧ್ಯ ದೇವಿಯ ಜನ್ಮದಿನವನ್ನು ಬೆಳಗ್ಗೆಯಿಂದಲೇ ಪ್ರಸಾದ ವಿತರಿಸುವ ಮೂಲಕ ಆಚರಿಸುತ್ತಿದೆ. ಅಲ್ಲದೆ ನಿನ್ನೆ ಶುಕ್ರವಾರವಾಗಿದ್ದರಿಂದ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಯ ವರ್ಧಂತಿ ಆಚರಿಸಲಾಯಿತು.
ಇನ್ನು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ದಿನದಂದು ತಾಯಿ ಚಾಮುಂಡಿಯನ್ನು ಅದ್ದೂರಿಯಾಗಿ ಅಲಂಕರಿಸಲಾಗಿದ್ದು, ಹೂವು, ಹಣ್ಣುಗಳಿಂದ ವಿಶೇಷವಾಗಿ ಅಲಂಕೃತಗೊಂಡ ದೇವಿಯು ಗರ್ಭಗುಡಿಯಿಂದ ಸಾರ್ವಜನಿಕರಿಗೆ ನೇರ ದರ್ಶನ ನೀಡುತ್ತಿದ್ದಾಳೆ.
ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ದೇವಿಗೆ ಮಾತ್ರವಲ್ಲ, ಇಡೀ ದೇವಾಲಯವನ್ನು ಹೂವು ಮತ್ತು ಹಣ್ಣುಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಇನ್ನು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರಿಗೆ ವಿಶೇಷ ಬಸ್ ಸೌಲಭ್ಯಗಳನ್ನು ಮಾಡಲಾಗಿದೆ.
ಬೆಟ್ಟಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಟ್ಟದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.