ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕಾಗಿ ಅತ್ಯಮೂಲ್ಯವಾದ ಸಲಹೆಗಳನ್ನು ನೀಡುವ ಸಲುವಾಗಿ ನಾಗರೀಕರಿಗೆ 10ನೇ ಫೆಬ್ರವರಿ 2025 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರದ ಎಲ್ಲ ನಾಗರೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs) ಹಾಗೂ ಸಂಘ-ಸಂಸ್ಥೆಗಳು ತಮ್ಮ ಸಲಹೆ/ಸೂಚನೆಗಳನ್ನು ಪಾಲಿಕೆಗೆ ಸಲ್ಲಿಸಲು ಅನುಕೂಲವಾಗುವಂತೆ ಪಾಲಿಕೆ ಕೇಂದ್ರ ಕಛೇರಿಯ ಮುಖ್ಯ ದ್ವಾರದ ಬಳಿ ಸಲಹಾ ಪೆಟ್ಟಿಗೆ(ಬಾಕ್ಸ್) ಅನ್ನು ಇರಿಸಿದ್ದು, ಸದರಿ ಸಲಹಾ ಪೆಟ್ಟಿಗೆಯ ಮೂಲಕ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ಮುಂದುವರಿದು, 2025-26ನೇ ಸಾಲಿನ ಕರಡು ಆಯವ್ಯಯಕ್ಕಾಗಿ ನಗರದ ಎಲ್ಲಾ ನಾಗರೀಕರು, ಸಂಘ-ಸಂಸ್ಥೆಗಳು ತಮ್ಮ ಅತ್ಯಮೂಲ್ಯವಾದ ಸಲಹೆ/ಸೂಚನೆಗಳನ್ನು ಇ-ಮೇಲ್ ಆದ [email protected] ಮೂಲಕವೂ ಸಲ್ಲಿಸಬಹುದಾಗಿದೆ.
ಈ ನಿಟ್ಟಿನಲ್ಲಿ ಬಿಬಿಎಂಪಿ ಆಯವ್ಯಯಕ್ಕಾಗಿ ಸಲಹೆಗಳನ್ನು ನೀಡಲು ಬಯಸುವವರು 10.02.2025ರ ಒಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ನಾಗರೀಕರು/ಸಂಘ-ಸಂಸ್ಥೆಗಳು ತಮ್ಮ ಅತ್ಯಮೂಲ್ಯವಾದ ಸಲಹೆ/ಸೂಚನೆಗಳನ್ನು ನೀಡಲು ತಿಳಿಯಪಡಿಸಿದೆ.
