NEWSನಮ್ಮಜಿಲ್ಲೆ

ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ

 ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಗರದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಸರಿಸಮವಾಗಿ ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ದಾಖಲಾಗಿವೆ. ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಯ ನೌಕರರಲ್ಲಿ ಕಾಣಿಸಿಕೊಂಡು ಸೋಂಕಿನಿಂದ ಇಂತಹ ಅವಘಡ ಸಂಭವಿಸಿವೆ ಎಂದು ಹೇಳಿದರು.

ಕೊರೊನಾ ಸೋಂಕು ತಗುಲುವ ಶೇ.90 ರಷ್ಟು ಮಂದಿಗೆ ವೆಂಟಿಲೇಟರ್ ಅಗತ್ಯವಿರುವುದಿಲ್ಲ. ತೀವ್ರ ಉಸಿರಾಟ ತೊಂದರೆಯಿಂದ ಗಂಭೀರಸ್ಥಿತಿಗೆ ಒಳಗಾದವರಿಗೆ ಮಾತ್ರ ಅಗತ್ಯವಿರುತ್ತದೆ. ಆದ್ದರಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ ಎಂದು ಆತಂಕಕ್ಕೊಳಗಾಗಬಾರದು. ಈಗಾಗಲೇ ಸರ್ಕಾರವು 15 ಸಾವಿರ ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದೆ ಎಂದರು.

ದೇಶದಲ್ಲೇ ಕೊರೊನಾ ಸೋಂಕು ಪರೀಕ್ಷೆಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. ಇಲ್ಲಿಯವರೆಗೂ 25,843 ಜನರಿಗೆ ಪರೀಕ್ಷೆ ಮಾಡಲಾಗಿದ್ದು, ಪ್ರತಿ 63 ವ್ಯಕ್ತಿಗಳಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೇ ತಿಂಗಳ ಒಳಗಾಗಿ ಪ್ರತಿ ಜಿಲ್ಲೆಗೆ 2ರಂತೆ 60 ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯನ್ನು ಕೊರೊನಾ ಸೋಂಕಿನಿಂದ ಮುಕ್ತವಾಗಿಸಲು ಜಿಲ್ಲಾಡಳಿತ ಸೇರಿದಂತೆ ಅಧಿಕಾರಿಗಳ ತಂಡವು ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಸೋಂಕು ನಿವಾರಿಸಲು ಅಗತ್ಯವಿರುವ ಸಲಕರಣೆಯನ್ನು ಒದಗಿಸುವಲ್ಲಿ ನಮ್ಮ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಈವರೆಗೆ 84 ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು, 24 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುತ್ತಾರೆ. ಇದಲ್ಲದೆ, 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 2,289 ಮಂದಿಗೆ ಪರೀಕ್ಷೆ ಮಾಡಲಾಗಿದೆ. ನಂಜನಗೂಡು ತಾಲೂಕಿಗೆ ಸಂಬಂಧಿಸಿದಂತೆ 53 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 43 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 1,478 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಎಂ.ಅಶ್ವಿನ್ ಕುಮಾರ್, ಸಿ.ಎಸ್.ನಿರಂಜನ್ ಕುಮಾರ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಮ್, ಉಪಾಧ್ಯಕ್ಷರಾದ ಎಂ.ವಿ.ಗೌರಮ್ಮ ಸೋಮಶೇಖರ್, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್, ನೋಡಲ್ ಅಧಿಕಾರಿ ಹರ್ಷಗುಪ್ತ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆಇತರರು ಉಪಸ್ಥಿತರಿದ್ದರು.

1 Comment

  • ಕರ್ನಾಟಕದಲ್ಲಿ ಕೊರೊನಾ ಸೋಂಕು ಹರಡುವುದನ್ನು ಸರ್ಕಾರ ನಿಯಂತ್ರಣ ಮಾಡುವಲ್ಲಿ ಸಫಲವಾಗುತ್ತಿದೆ. ಸಚಿವರು ಮತ್ತು ಮುಖ್ಯಮಂತ್ರಿ ಅವರ ಜತೆಗೆ ವೈದ್ಯ ಸಿಬ್ಬಂದಿ ಕಾರ್ಯವೂ ಶ್ಲಾಘನೀಯವಾದದು

Leave a Reply