ಬೆಳಗಾವಿ: (ಸುವರ್ಣ ವಿಧಾನಸೌಧ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸಂಬಂಧ ಸಾರಿಗೆ ಸಚಿವರು ಇದೇ ಡಿ.31ರೊಳಗೆ ನೌಕರರ ಸಂಘದ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶೋತ್ತರ ಅವಧಿಯಲ್ಲಿ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿ, ಈ ಭರವಸೆ ನೀಡಿದರು.
ನಾಲ್ಕೂ ಸಾರಿಗೆ ಸಂಸ್ಥೆಗಳಿಂದ ₹8,237 ಕೋಟಿ ರೂ. ಬೇಡಿಕೆ ಇತ್ತು. ₹6,543 ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ. ಉಳಿದ ₹1,694 ಕೋಟಿ ಕೊಡಬೇಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಹೆಚ್ಚಾಗಿತ್ತು. ಇದಕ್ಕೆ ಕಾಂಗ್ರೆಸ್‌ನ ಮಂಥರ್‌ಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿರುವುದಾಗಿ ತಿಳಿಸಿದರು.
ಕೋವಿಡ್ ಸಮಯದಲ್ಲಿ ಆದ ಆರ್ಥಿಕ ಸಮಸ್ಯೆ ಮತ್ತು ಇಂಧನ ಬೆಲೆ ಹೆಚ್ಚಿರುವ ಕಾರಣ, 2020 ಜನವರಿ 1ರಿಂದ ಆಗಬೇಕಿದ್ದ ವೇತನ ಹೆಚ್ಚಳವನ್ನು ಕೋವಿಡ್ ಅವಧಿಯಲ್ಲಿ ಪರಿಷ್ಕರಣೆ ಮಾಡಿರಲಿಲ್ಲ ಎಂದು ಹೇಳಿದರು.
ನೌಕರರ ಸಂಘದ ಪದಾಧಿಕಾರಿಗಳ ಮನವಿ: ಇನ್ನು ಸೋಮವಾರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸುವುದಕ್ಕೆ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಸಚಿವರ ಬಳಿ ಮನವಿ ಮಾಡಿದ್ದರು. ಅದರಂತೆ ವಿಪಕ್ಷ ನಾಯಕರು ಸೇರಿದಂತೆ ಸಮಸ್ತ ಶಾಸಕರು ಕೂಡ ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಗೂಡಿಸುತ್ತಿರುವುದು ನಮಗೆ ಸಂತಸ ತಂದಿದೆ. ಆದರೆ ಅದು ಕಾರ್ಯ ರೂಪಕ್ಕೆ ಬರಬೇಕು ಎಂದು ಸಂಘದ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ಇನ್ನು ಸಾರಿಗೆ ನೌಕರರಿಗೆ ಆಗುತ್ತಿರುವ ತಾರತಮ್ಯತೆ ಬಗ್ಗೆ .ಅಶ್ವತ್ಥನಾರಾಯಣ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವರಿಗೆ ಸಂಪೂರ್ಣ ದಾಖಲೆಗಳನ್ನು ಸಂಘಟನೆ ವತಿಯಿಂದ ಒದಗಿಸಿಕೊಟ್ಟಿದ್ದೆವು. ಅದನ್ನು ನೋಡಿ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿರುವುದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇವೆ ಎಂದರು.
ಇನ್ನು ವಿಪಕ್ಷ ನಾಯಕರು ಹಾಗೂ ಆಡಳಿತ ಪಕ್ಷ ಕಾಂಗ್ರೆಸ್‌ನ ಮಂಥರ್‌ಗೌಡ ಅವರು ನಮ್ಮ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿರುವುದಕ್ಕೂ ಅವರಿಗೆ ಅಬಾರಿಯಾಗಿದ್ದೇವೆ ಎಂದು ಹೇಳಿದರು.