ತಿ.ನರಸೀಪುರ: ಕೊರೊನಾ ಬಾಧೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ ಮೊದಲ ಕಂತಿನ ಹಣದ ಜೊತೆಗೆ ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ 4000 ರೂ.ಗಳನ್ನು ನೀಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಒತ್ತಾಯಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದೆ. ಪರಿಣಾಮ ಕೃಷಿ ಕ್ಷೇತ್ರ ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಕೃಷಿ ಉಳಿವಿಗೆ ರೈತರ ನೆರವಿಗಾಗಿ ಹಲವಾರು ಉಪಯುಕ್ತ ಯೋಜನೆ ಜಾರಿಗೆ ತಂದಿರುವುದು ಅಭಿನಂದನಾರ್ಹವಾಗಿದ್ದು ಕೃಷಿ ಸಮ್ಮಾನ್ ಯೋಜನೆಯಡಿ ಮೊದಲ ಕಂತಿನ ಹಣವಾಗಿ 2000 ರೂ.ಗಳನ್ನು ರೈತರಿಗೆ ನೀಡಲು ಮುಂದಾಗಿದೆ. ಈ ಕಂತಿನ ಜೊತೆಗೆ ರಾಜ್ಯ ಸರ್ಕಾರದ ಪಾಲಿನ 2000 ರೂ.ಗಳನ್ನು ಸೇರಿಸಿ ಒಟ್ಟಾಗಿ 4000 ರೂ.ಕೊಟ್ಟರೆ ರೈತ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು ರಾಜ್ಯ ಸರ್ಕಾರ ಇದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ರೈತ ಬೆಳೆದ ಹಣ್ಣು-ತರಕಾರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರೈತ ಪರಿತಪಿಸುವಂತಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರವೇಶಿಸಿ ಹಾಪ್ ಕಾಮ್ಸ್ ಗಳ ಮೂಲಕ ಸರ್ಕಾರವೇ ಖರೀದಿಸಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಜಾರಿಗಿಳಿಸಿದಲ್ಲಿ ರೈತರ ಬೆಳೆಗಳಿಗೆ ನಿಖರವಾದ ಬೆಲೆ ಸಿಗಲಿದೆ ಎಂದರು.
ಭತ್ತ ಖರೀದಿ ಕೇಂದ್ರದ ಮೂಲಕ ರೈತರಿಂದ ಭತ್ತ ಖರೀದಿ ಮಾಡಿ ಮೂರು ತಿಂಗಳಾದರೂ ಹಣ ನೀಡಿಲ್ಲ.ರೈತರು ಭತ್ತ ಬೆಳೆಯಲು ಸಾಲ ಸೋಲ ಮಾಡಿ ಈಗ ಬಡ್ಡಿ ಕಟ್ಟುವ ಪರಿಸ್ಥಿತಿ ಎದುರಾಗಿದೆ.ರೈತರಿಗೆ ಕೊರೀನಾಕ್ಕಿಂತ ಸಾಲಭಾದೆಯೇ ಹೆಚ್ಚಾಗಿದ್ದು ಸರ್ಕಾರ ಶೀಘ್ರದಲ್ಲೇ ಖರೀದಿ ಮಾಡಿರುವ ಭತ್ತಕ್ಕೆ ಹಣ ನೀಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.