ಬೀದಿಗೆ ಬಿದ್ದ ಗುಲಾಬಿ ಬೆಳೆಗಾರರು
ದೊಡ್ಡಬಳ್ಳಾಪುರ: ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಹೂ ಬೆಳಗಾರರು ಬೀದಿಗೆ ಬೀಳುವಂತಾಗಿದೆ. ತಾಲೂಕಿನಲ್ಲಿ ಗುಲಾಬಿ, ಜರ್ಬಾರ್, ಸೆವಂತಿಗೆ ಹೂ ಗಳನ್ನು ಬೆಳೆದ ರೈತರು ಕಂಗಾಲಾಗಿದ್ದು ಹೂ ಗಿಡದಲ್ಲೇ ಕೊಳೆಯುತ್ತಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ದೇವಾಲಯಗಳು ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ಹೂ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಸಾಲ ಮಾಡಿ ಬಂಡವಾಳ ಹೂಡಿರುವ ರೈತರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿ ಗುಲಾಬಿ, ಜರ್ಬಾರ್, ಸೆವಂತಿಗೆ ಬೆಳೆದ ಮುನಿಕೃಷ್ಣಪ್ಪ ಎಂಬ ರೈತ ಬ್ಯಾಂಕ್ನಲ್ಲಿ ಸಾಲ ಮಾಡಿ ಬಂಡವಾಳ ಹೂಡಿಕೆ ಮಾಡಿದ್ದೇವೆ ಆದರೆ ವೈರಸ್ ಕಾರಣದಿಂದ ಹೂಗಳನ್ನು ಯಾರು ಕೊಳ್ಳುತ್ತಿಲ್ಲ ಇದರಿಂದ ಕಿತ್ತು ಎಲ್ಲ ತಿಪ್ಪೆಗೆ ಸುರಿಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಸಂಬಂಧಪಟ್ಟ ತೋಟಗಾರಿಕಾ ಅಧಿಕಾರಿಗಳು ಇಂತಹ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ರೈತ ಮುನಿಕೃಷ್ಣಪ್ಪ ಮನವಿ ಮಾಡಿದ್ದಾರೆ. ಅಲ್ಲದೇ ಹೂವನ್ನು ಮಾರಲು ಮಾರುಕಟ್ಟೆ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಕೊರೊನಾ ಮಹಾಮಾರಿಗೆ ಜಗತ್ತೇ ತತ್ತರಿಸಿ ಹೋಗಿದ್ದು, ಒಂದೆಡೆ ವಸ್ತುಗಳ ಬೆಲೆ ಏರಿಕೆಯಾದರೆ ಮತ್ತೊಂದೆಡೆ ರೈತರು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಂಡು ರೈತರಿಗೆ ನೆರವಾಗಬೇಕಿದೆ.