ಬೆಂಗಳೂರು: ಪ್ರಥಮ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 26 ರಂದು ನಡೆಯಬೇಕಿತ್ತು ಆದರೆ ಕೊರೊನಾ ಸೋಂಕಿನಿಂದ ವಿವಾಹವನ್ನು ಮುಂದೂಡಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಕಾಂಕ್ಷೆಯ ಯೋಜನೆಯಾದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಎ ದರ್ಜೆಯ ದೇವಸ್ಥಾನ ಮತ್ತು ಇತರ ಆಯ್ದ ಇಲಾಖೆಯ ದೇವಸ್ಥಾನಗಳಲ್ಲಿ 4500ಕ್ಕೂ ಹೆಚ್ಚು ಅರ್ಜಿಗಳನ್ನು ಫಲಾನುಭವಿಗಳು ಪಡೆದಿದ್ದು ಸುಮಾರು 2000 ಅರ್ಜಿಗಳು ಅಧಿಕೃತ ದಾಖಲೆಗಳೊಂದಿಗೆ ವಾಪಸ್ ಬಂದಿವೆ ಎಂದು ತಿಳಿಸಿದ್ದಾರೆ.
ವಿವಾಹ ಸಂಬಂಧ ಈಗಾಗಲೇ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿಚಾರ ಸಂಕೀರ್ಣದ ಸಭೆಗಳು ನಡೆದಿದ್ದು, ರಾಜ್ಯಾದ್ಯಂತ ಸಪ್ತಪದಿ ರಥಗಳು ಕಾರ್ಯಕ್ರಮದ ಕುರಿತು ಪ್ರಚಾರವನ್ನು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಸಾಕಷ್ಟು ಪೂರ್ವ ಸಿದ್ದತೆಗಳೊಂದಿಗೆ ವಿವಾಹ ನೆರವೇರಿಸಲು ಇಲಾಖೆ ಸಜ್ಜುಗೊಂಡಿತ್ತು. ಆದರೆ ಕೋವಿಡ್ -19 ನ ಸಮಸ್ಯೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿದ ನಂತರ ಏಪ್ರಿಲ್ 26 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
ಎರಡನೇ ಹಂತದ ದಿನಾಂಕಕ್ಕೆ ಜೋಡಿಸಿಕೊಳ್ಳುವ ಕುರಿತು ನಿರ್ಣಯಿಸಿ ಮುಂದೂಡಿದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದೆಂದು ತಿಳಿಸಿದ್ದಾರೆ.