ನ್ಯೂಡೆಲ್ಲಿ: ವಿಶ್ವಮಾರಿ ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ, ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟವನ್ನು ಸ್ವಲ್ಪ ಮಟ್ಟಿಗೆ ಇಳಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ನೌಕರರ ನಿವೃತ್ತಿ ವೇತನ (ಪಿಂಚಣಿ) ಕಡಿತಗೊಳಿಸಲಿದೆ ಎಂಬುವುದು ಶುದ್ಧಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರರ ಪಿಂಚಣಿ ಕಡಿತ ಮಾಡುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದುದು ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವಾಲಯ,ನಿವೃತ್ತಿ ವೇತನದಲ್ಲಿ ಶೇ.20ರಷ್ಟು ಸಂಬಳವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನಮ್ಮ ನಿವೃತ್ತ ಉದ್ಯೋಗಿಗಳ ಪಿಂಚಣಿ ಕಡಿತ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲಎಂದು ಹೇಳಿದೆ.
ಎನ್ಎಸ್ಎಪಿ ಪ್ರಕಾರ, 80 ವರ್ಷ ಮೇಲ್ಪಟ್ಟವರಿಗೆ ಸಿಗಲಿರುವ ಪಿಂಚಣಿ ಮೊತ್ತದಲ್ಲಿ ಕಡಿತ ಮಾಡಲಾಗಿದೆ. ಉಳಿದವರಿಗೂ ಇದು ಅನ್ವಯವಾಗಬಹುದು, ಜವಾನ(peon) ನಿಂದ ಮಾಜಿ ರಾಷ್ಟ್ರಪತಿಗಳ ತನಕ ಎಲ್ಲರ ಪಿಂಚಣಿ ಮೊತ್ತವೂ ಕಡಿತ ಎಂಬ ಸುದ್ದಿಯನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿದ್ದರಿಂದ ಗೊಂದಲ ಉಂಟಾಗಿತ್ತು. ಏಪ್ರಿಲ್ 6ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಂಸದರ ಸಂಬಳದಲ್ಲಿ ಶೇ. 30ರಷ್ಟು ಕಡಿತಗೊಳಿಸುವ ಬಗ್ಗೆ ಮಾತ್ರ ನಿರ್ಣಯ ಕೈಗೊಳ್ಳಲಾಯಿತು ಎಂದು ಪಿಐಬಿ ಕೂಡಾ ಸ್ಪಷ್ಟಪಡಿಸಿದೆ.
ಹೀಗಾಗಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವೇತನದಲ್ಲಿ ಕಡಿತವಾಗಬಹುದು ಎಂಬ ಆತಂಕದಲ್ಲಿರುವ ಉದ್ಯೋಗಿಗಳು ಭಯಪಡದೇ ನಿರಾಳರಾಗಿರಿ ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.