ಬೆಂಗಳೂರು: ಕಬ್ಬು ಬೆಳೆಗಾರ ರೈತರ 9ನೇ ದಿನದ ಧರಣಿ ನಿರತರು ಇಂದು ಅರೆಬೆತ್ತಾಲಾಗಿ ತಲೆ ಮೇಲೆ ಸೈಜುಗಲ್ಲುಗಳನ್ನು ಹೊತ್ತು ರೈತರನ್ನು ಬೆತ್ತಲೆ ಮಾಡಿ, ತಲೆ ಮೇಲೆ ಕಲ್ಲು ಎತ್ತಿಹಾಕಿದ ಸರ್ಕಾರ ಎಂದು ವಿನೂತನವಾಗಿ ಪ್ರತಿಭಟಿಸಿದ್ದು, ನಾಳೆ ಸಂಜೆವರೆಗೆ ಸರ್ಕಾರಕ್ಕೆ ಗಡುವು ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಕಬ್ಬು ಬೆಳೆಗಾರ ರೈತರು ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿರುವ ಆಹೋ ರಾತ್ರಿ ಧರಣಿಯು 9ನೇ ದಿನವು ಮುಂದುವರಿದಿದೆ. ಇಂದು ನೂರಾರು ರೈತರು ಅರೆಬೆತ್ತಲೆಯಾಗಿ ತಲೆ ಮೇಲೆ ಕಲ್ಲು ಹೊತ್ತು ಸರ್ಕಾರದ ವಿರುದ್ಧ ಆಕ್ರೋಶ ಭರಿತರಾಗಿ ಘೋಷಣೆ ಕೂಗಿದರು.
ರೈತರನ್ನು ಬೆತ್ತಲೆ ಮಾಡಿದ ಸರ್ಕಾರಕ್ಕೆ ಧಿಕ್ಕಾರ, ಕಬ್ಬು ಬೆಳೆಗಾರರನ್ನು ಸಕ್ಕರೆ ಕಾರ್ಖಾನೆ ಮಾಲೀಕರ ಮರ್ಜಿಯಲ್ಲಿ ಕಬ್ಬಿನ ರೀತಿ ಅರೆಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಕೆಂಡಕಾರಿದರು.
ಅಹೋರಾತ್ರಿ ಚಳವಳಿ ನಿರತರಾಗಿರುವ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಸರ್ಕಾರ ನಿದ್ರೆ ಮಾಡುತ್ತಿರುವ ನಾಟಕ ಆಡಬಾರದು, ಇಂತಹ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ. ಅದನ್ನು ಪ್ರಯೋಗ ಮಾಡಿದರೆ ಸರ್ಕಾರಕ್ಕೆ ಗಂಡಾಂತರ ಖಚಿತ. ಉದ್ಯಮಿಗಳ ಮಾರ್ವಾಡಿಗಳ ಮರ್ಜಿಯಲ್ಲಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತ ಪರ ಎಂದು ಹೇಳುವ ಸರ್ಕಾರ ರೈತರನ್ನು ಬೀದಿಯಲ್ಲಿ ಮಲಗುವಂತೆ ಮಾಡಿರುವುದು ಏಕೆ ಎಂದು ಕಿಡಿಕಾರಿದರು.
ಇನ್ನು ನಾಳೆ ಸಂಜೆ ಒಳಗೆ ಸರ್ಕಾರದ ನಿರ್ಧಾರ ಹೊರ ಬೀಳದಿದ್ದರೆ, ರೈತರ ಹೋರಾಟದ ಕಠಿಣ ಅಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ 9 ದಿನಗಳಿಂದ ವಿಭಿನ್ನ ರೀತಿಯ ಹೋರಾಟ ನಡೆಸುತ್ತಿದ್ದರು ಕುಂಭಕರ್ಣದ ರೀತಿಯಲ್ಲಿ ಮಲಗಿದ್ದ ಸರ್ಕಾರ, ಎಚ್ಚೆತು ಕಬ್ಬುದರ ಏರಿಕೆ ಮಾಡಲಿ ಸರ್ಕಾರ ಪದೇ ಪದೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡುವ ನಾಟಕವಾಡದೆ, ಕಾನೂನಿನಂತೆ ಕಬ್ಬು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡು ತಾಕತ್ತು ತೋರಿಸಲಿ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ. ಪಾಟೀಲ್, ರೈತ ಸಂಘ ವಿ.ಅರ್. ನಾರಾಯಣರೆಡ್ಡಿ, ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶಿವಮ್ಮ, ಹಾಸನ ಮಂಜೇಗೌಡ ಸೇರಿ ರೈತ ಮಹಿಳೆಯರು ಭಾಗವಹಿಸಿದ್ದರು.