ಮೈಸೂರು: ಹೆಲ್ಮೆಟ್ ಇಲ್ಲದೆ ವಾಹನ ಓಡಿಸಿದರೆ ಇಷ್ಟು ದಿನ ದಂಡ ಕಟ್ಟಬೇಕಿತ್ತು. ಆದರೆ, ಸರ್ಕಾರದ ಆದೇಶದಂತೆ ಮೂರು ತಿಂಗಳ ಅವಧಿಗೆ ಸವಾರರ ಚಾಲನಾ ಪರವಾನಗಿ ಅಮಾನತಾಗಲಿದೆ. ಸದ್ಯಕ್ಕೆ ಈ ನಿಯಮ ಬೆಂಗಳೂರು, ಮೈಸೂರು ಹಾಗೂ ಪ್ರಮುಖ ನಗರಗಳಲ್ಲಿ ಜಾರಿಗೆ ಬಂದಿದೆ.
ಅದರಂತೆ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡಿದ 13 ಮಂದಿಯ ವಿರುದ್ಧ ಮೈಸೂರಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದು, ಅವರ ವಾಹನ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲಿದ್ದಾರೆ.
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಬೈಕ್ ಓಡಿಸುವವರು, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ, ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಪೊಲೀಸರಿಗೆ ಹೆದರದವರು ಸಾಕಷ್ಟು ಮಂದಿ ಇದ್ದಾರೆ. ಇದನ್ನು ಮನಗಂಡ ಸರ್ಕಾರ ಇನ್ನು ಮುಂದೆ ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುವುದು ಮಾತ್ರವಲ್ಲದೆ, ಚಾಲನಾ ಪರವಾನಗಿಯನ್ನುಅಮಾನತುಗೊಳಿಸಲು ಎಲ್ಲಾ ಆರ್‌ಟಿಓ ಕಚೇರಿಗಳಿಗೆ ಸೂಚನೆ ನೀಡಿತ್ತು.
ನಿಯಮ ಜಾರಿಗೆ ಬಂದಾಗಿನಿಂದ ನಗರದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತೀ ದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುವುದರ ಜತೆಗೆ ಹೆಲ್ಮೆಟ್ ಧರಿಸದ ಹೆಚ್ಚು ಪ್ರಕರಣಗಳು ದಾಖಲಾಗಿರುವವರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಪ್ರತಿ ದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಸಂಚಾರ ಪೊಲೀಸರು ನಗರದ ಪ್ರಮುಖ ವೃತ್ತ, ಬಡಾವಣೆಗಳಲ್ಲಿ ವಾಹನ ತಪಾಸಣೆ ನಡೆಸುವ ಮೂಲಕ ಹೆಲ್ಮೆಟ್ ಧರಿಸದ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಸರಾ ಕಾರಣದಿಂದ ಸರ್ಕಾರದ ಆದೇಶ ಪಾಲನೆ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.