ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನವೆಂಬರ್ ನಂತರ ಪುನರಾರಂಭವಾಗಬಹುದು ಎನ್ನಲಾಗುತ್ತಿದೆ. ಆದರೆ ಹಬ್ಬಗಳ ಸಾಲಿನ ನಂತರ ಕೋವಿಡ್-19 ಸೋಂಕಿನ ಪ್ರಮಾಣದ ಮೇಲೆ ಇದು ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಮೂಲಕ ಶಾಲೆಗಳ ಆರಂಭದ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿದ್ದು, ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಯನ್ನು ನವೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಅಲ್ಲದೇ ನವೆಂಬರ್ 30 ರವರೆಗೆ ಶಾಲೆಗಳನ್ನು ಆರಂಭಿಸದಂತೆ ಆದೇಶ ಕೂಡ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳ ಆರಂಭದ ಬಗ್ಗೆ ಶ್ರೀಘ್ರ ನಿರ್ಧರಿಸಲಿದೆ.
ಜತೆಗೆ ನವೆಂಬರ್ 2 ರಿಂದ ಶಾಲಾ ಶಿಕ್ಷಕರು, ಸಿಬ್ಬಂದಿ ಮುಂದಿನ ಆದೇಶದವರೆಗೆ ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ವಿದ್ಯಾಗಮ ಸೇರಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈಗಾಗಲೇ ನ.17ರಿಂದ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಪುನಾರಂಭಿಸಲು ಅನುಮತಿ ನೀಡಿದೆ.
ರಾಜ್ಯದಲ್ಲಿ ಶಾಲೆಗಳ ಆರಂಭದ ಬಗ್ಗೆ ಸಾರ್ಜಜನಿಕ ಶಿಕ್ಷಣ ಇಲಾಖೆ ನವೆಂಬರ್ 2ರಂದು ಸಭೆಯನ್ನು ಕರೆದಿದ್ದು, ಅಂದು ನಡೆಯಲಿರುವ ಸಭೆಯಲ್ಲಿ ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತಂತೆ ಚರ್ಚೆ ನಡೆಸಲಿದೆ. ಈ ಸಭೆಯಲ್ಲಿ ಚರ್ಚೆಯ ನಂತರ ಮುಖ್ಯಮಂತ್ರಿಗಳು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಲಿದ್ದಾರೆ. ಆ ನಂತರ ಶಾಲೆಗಳನ್ನು ಪುನರಾರಂಭಿಸಬೇಕೇ ಅಥವಾ ಈ ವರ್ಷವನ್ನು ಶೂನ್ಯ ವರ್ಷ ಎಂದು ಪರಿಗಣಿಸಬೇಕೇ ಎಂಬ ಬಗ್ಗೆ ನಿರ್ಧಾರ ಹೊರಬೀಳಲಿದೆ.
ಈಗಾಗಲೇ ಶಿಕ್ಷಣ ಇಲಾಖೆ ನವೆಂಬರ್ ಕೊನೆಯ ವಾರದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿದೆ, ಇದರಿಂದಾಗಿ ರಾಜ್ಯದಲ್ಲಿನ ಶಾಲೆ ಆವರಣ, ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.