ನ್ಯೂಡೆಲ್ಲಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯನ್ನು ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕೂಗು ಪಕ್ಷದೊಳಗೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್ ಶೀಘ್ರವೇ ಪ್ರಮುಖ ನಾಯಕರ ಸಭೆ ಕರೆಯಲಿದೆ.
ಈ ಸಂಬಂಧ ಎಲ್ಲಾ ರಾಜ್ಯ ಕಾಂಗ್ರೆಸ್ ಘಟಕಗಳಿಗೂ ಮಾಹಿತಿ ಪತ್ರ ಕಳುಹಿಸಲಾಗಿದ್ದು ಮತ ಚಲಾಯಿಸಲು ಅರ್ಹ ಸದಸ್ಯರ ಪಟ್ಟಿ ಕಳುಹಿಸುವಂತೆ ಪತ್ರದಲ್ಲಿ ಕೋರಲಾಗಿದೆ. ಎಐಸಿಸಿಯೂ ತನ್ನ ಸಭೆ ಕರೆಯಲು ನಿರ್ಧರಿಸಿದ್ದು ಶೀಘ್ರವೇ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಿ ತಿಳಿಸಲಾಗುವುದು ಎಂದು ಎಲ್ಲಾ ಕಾಂಗ್ರೆಸ್ ರಾಜ್ಯ ಘಟಕಗಳಿಗೆ ತಿಳಿಸಿದೆ.
ಈ ವರ್ಷದ ಅಂತ್ಯದಲ್ಲಿ ಇಲ್ಲ ಮುಂದಿನ ವರ್ಷದ ಆರಂಭದಲ್ಲಿ ಎಐಸಿಸಿ ಸಭೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದು, ಕೇರಳ, ತಮಿಳುನಾಡು, ಪಶ್ಛಿಮ ಬಂಗಾಳ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನವೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈಗಾಗಲೇ ಎಲ್ಲಾವೂ ನಿರ್ಧಾರವಾಗಿದ್ದು, ಅಧಿಕೃತವಾಗಿ ಪ್ರಕಟಿಸಬೇಕಾಗಿದೆ. ಫೆಬ್ರವರಿ 2021ಕ್ಕೆ ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದು ಸೋನಿಯಾಗಾಂಧಿ ಆಗಸ್ಟ್ ತಿಂಗಳಲ್ಲಿ ತಿಳಿಸಿದ್ದಾರೆ. ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕಾಂಗ್ರೆಸ್ ನ 23 ಹಿರಿಯ ನಾಯಕರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ
ನಿರ್ಧಾರ ಕೈಗೊಳ್ಳಲಾಗಿದೆ.
ಸೋನಿಯಾ ಗಾಂಧಿ ಅವರು ಹುದ್ದೆಯಿಂದ ಕೆಳಗಿಳಿಯಲು ಬಯಸಿದರೇ ನೀವೇ ಹುದ್ದೆ ಅಲಂಕರಿಸಬೇಕು ಎಂದು ರಾಹುಲ್ ಗಾಂಧಿಗೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್
ಅಮರಿಂದರ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ಸೇರಿ ಹಲವಾರು ರಾಜ್ಯ ಕಾಂಗ್ರೆಸ್ ನಾಯಕರು ಕೋರಿದ್ದಾರೆ.
ಹೀಗಾಗಿ ಮತ್ತೆ ರಾಹುಲ್ ಗಾಂಧಿಗೆ ರಾಷ್ಟ್ರಾಧ್ಯಕ್ಷರ ಪಟ್ಟಕಟ್ಟಲು ಸಿದ್ಧತೆಗಳು ಗರಿಗೆದರಿದ್ದು ಪಕ್ಷದೊಳಗಿನ ಬೇಗುದಿಯನ್ನು ಶಮನಮಾಡಿ ಮುಂದಿನ ಲೋಕಾಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಪಕ್ಷದ ನಾಯಕರು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.