ಬೆಂಗಳೂರು: ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದವರು, ಶಿರಾ ಉಪಚುನಾವಣೆಯಲ್ಲೂ ಅಡ್ಡದಾರಿ ಹಿಡಿದಿದ್ದಾರೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ದೂರಿದ್ದಾರೆ.
ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಮತಯಾಚಿಸಲು ಆಗಮಿಸಿದ ವೇಳೆ ಶಿರಾ ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 15 ತಿಂಗಳುಗಳಾಗಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನ ಬೀದಿಗೆ ಬಂದಿದ್ದಾರೆ. ಅವರಿಗೆ ಏನಾದರೂ ಪರಿಹಾರ ಕೊಟ್ಟಿದ್ದಾರಾ? ಎಂದು ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರು ಉಪ ಚುನಾವಣೆಯಲ್ಲಿ ಹಣಬಲ, ತೋಳ್ಬಲ ಉಪಯೋಗ ಮಾಡುತ್ತಿದ್ದಾರೆ. ಚುನಾವಣಾ ಆಯೋಗವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ವಾಮಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ. ಕೊರೊನಾ ನಿರ್ವಹಣೆ ಮಾಡುವುದರಲ್ಲಿ ಹಾಗೂ ಸೋಂಕು ತಡೆಗಟ್ಟುವಲ್ಲಿ ಯಡಿಯೂರಪ್ಪ ಅವರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಲಕ್ಷಾಂತರ ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಹೆಣದ ರಾಶಿಯ ಮೇಲೆ ಪಿಪಿಇ ಕಿಟ್ ದುಡ್ಡು ಹೊಡೆದಿದ್ದಾರೆ. ಇವರು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದ್ದಾರೆ. ಈಗ ಮತ್ತೆ ಪ್ರವಾಹ ಬಂದಿದ್ದು ಜನರನ್ನು ಬೀದಿಗೆ ತಂದಿದೆ. ಆದರೂ ನಯಾ ಪೈಸೆ ಪರಿಹಾರವನ್ನು ಇಲ್ಲಿವರೆಗೆ ನೀಡಿಲ್ಲ ಕಿಡಿಕಾರಿದರು.
15ನೇ ಹಣಕಾಸು ಆಯೋಗದ ಹಣವೂ ಬಂದಿಲ್ಲ. ಪ್ರವಾಹದ ನೆರವು ಇನ್ನೂ ಸಿಕ್ಕಿಲ್ಲ. ರಾಜ್ಯದ ಬಿಜೆಪಿ ಸಂಸದರು ಅಂಜುಬುರಕರು. ಕೇಂದ್ರದ ಮೇಲೆ ಯಾಕೆ ಒತ್ತಡ ತರಲಿಲ್ಲ? ಬರಬೇಕಾದ ನೆರವು ಕೊಡಿಸೋಕೆ ಆಗಲಿಲ್ಲ? ಕೇಂದ್ರವು ರಾಜ್ಯಕ್ಕೆ ಐದು ಪೈಸೆ ನೆರವು ಕೊಟ್ಟಿಲ್ಲ. ಕೇಂದ್ರ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಂತಾರೆ, ಕೇಂದ್ರ ಯಾಕೆ ಇನ್ನೂ ನೆರವು ನೀಡಿಲ್ಲ ಹೇಳ್ರಪ್ಪಾ ಎಂದು ಬಿಜೆಪಿ ನಾಯಕರ ವಿರುದ್ಧ ಖಂಡ್ರೆ ವಾಗ್ದಾಳಿ ನಡೆಸಿದರು.
ಶಿರಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಜಯಸಾಧಿಸಲಿದೆ. ನಮ್ಮ ಅಭ್ಯರ್ಥಿ ಜಯಚಂದ್ರ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಂತಹವರನ್ನು ನೀವೆಲ್ಲರೂ ಆರಿಸಿ ಕಳಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮನವಿ ಮಾಡಿದರು.