ಬೆಂಗಳೂರು: ಬಿಬಿಎಂಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ಗೊರಕೆ ಸಾಕು ಪೊರಕೆ ಬೇಕು ಅಭಿಯಾನಕ್ಕೆ ಭಾನುವಾರ ಆಮ್ ಆದ್ಮಿ ಪಕ್ಷ ಚಾಲನೆ ನೀಡಿರು.
ಮಂಜುನಾಥ ನಗರದ ನಿವಾಸಿಗಳಿಗೆ ಪಕ್ಷದ ಬಾವುಟ ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ಬೆಂಗಳೂರಿನ ಜನತೆ ಮೂರು ಪಕ್ಷಗಳ ಕೆಟ್ಟ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಆದ ಕಾರಣ ಬಿಬಿಎಂಪಿಯ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ಅಭಿಯಾನವನ್ನು ಪ್ರತಿ ವಾರ ಮಾಡಲಿದ್ದೇವೆ ಎಂದು ಹೇಳಿದರು.
ವರನಟ ರಾಜ್ಕುಮಾರ್ ಅವರ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ “ಮನೆ, ಮನೆ ಆಮ್ ಆದ್ಮಿ” ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ. 70 ರಷ್ಟು ಬೆಂಗಳೂರಿನ ಜನತೆ ಬೆಂಗಳೂರಿನಲ್ಲೂ ದೆಹಲಿ ಮಾದರಿ ಆಮ್ ಆದ್ಮಿ ಪಕ್ಷದ ಸರ್ಕಾರ ಇರಬೇಕು ಎಂದು ತಿಳಿಸಿದ್ದಾರೆ. ಈ ನಂಬಿಕೆಯನ್ನು ನಾವು ಅಧಿಕಾರಕ್ಕೆ ಬಂದರೆ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಅಭಿಯಾನದ ಮೂಲಕ ಬೆಂಗಳೂರಿನ ಪ್ರತಿ ನಾಗರಿಕರ ಮನೆಗೆ ಭೇಟಿ ನೀಡಿ ಸರ್ಕಾರದ ಹಾಗೂ ಬಿಬಿಎಂಪಿಯ ವೈಫಲ್ಯ ಗಳನ್ನು ತಿಳಿಸಲಾಗುವುದು. ಮೂರ ಪಕ್ಷಗಳಿಗಿಂತ ಆಮ್ ಆದ್ಮಿ ಪಕ್ಷ ಹೇಗೆ ಭಿನ್ನ ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅಭಿಯಾನದಲ್ಲಿ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ, ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಕಾರ್ಯದರ್ಶಿ ಸಂಚಿತ್ ಸಹಾನಿ,ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ರಾಜಾಜಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗುರುಮೂರ್ತಿ, ಮಂಜುನಾಥ್ ನಗರ ವಾರ್ಡ್ ಅಧ್ಯಕ್ಷ ಬಾಲಕೃಷ್ಣೇಗೌಡ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಫಣಿರಾಜ್.ಎಸ್.ವಿ. ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.