ಕೆ.ಆರ್.ಮಾರುಕಟ್ಟೇಲಿ ಅಗ್ನಿ ಅವಘಡ ತಡೆಗೆ ಫೈರ್ ಆಡಿಟ್: ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಕೆ.ಆರ್. ಮಾರುಕಟ್ಟೆಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಅಗ್ನಿಯಿಂದ ಉಂಟಾಗಬಹುದಾದ ಅಪಾಯಗಳು, ಅಗ್ನಿಶಾಮಕ ವ್ಯವಸ್ಥೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡಲೇ ಫೈರ್ ಆಡಿಟ್ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಅಗ್ನಿ ಅವಘಡಗಳು ಸಂಭವಿಸುವುದನ್ನು ತಡೆಯಲು ಫೈರ್ ಆಡಿಟ್ ನಡೆಸಿ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಅಗ್ನಿಯಿಂದ ಉಂಟಾಗಬಹುದಾದ ಅಪಾಯಗಳು, ಅಗ್ನಿಶಾಮಕ ವ್ಯವಸ್ಥೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡಲೇ ಫೈರ್ ಆಡಿಟ್ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಹೊರಬರಲು ತುರ್ತು ನಿರ್ಗಮನ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಜತೆಗೆ ಅಗ್ನಿಯನ್ನು ತ್ವರಿತವಾಗಿ ನಿಯಂತ್ರಿಸುವ ಉದ್ದೇಶದಿಂದ ಅಗ್ನಿಶಾಮಕ ಪೈಪ್‌ಗಳನ್ನು (Fire Extinguisher Pipe) ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಒತ್ತುವರಿ ತೆರವುಗೊಳಿಸಿ: ಕೆ.ಆರ್. ಮಾರುಕಟ್ಟೆ ಕಟ್ಟಡದಲ್ಲಿರುವ ಮಳಿಗೆಗಳ ಮುಂಭಾಗದಲ್ಲಿ ಮಾಡಿರುವ ಒತ್ತುವರಿಗಳನ್ನು ಗುರುತಿಸಿ, ಸಂಬಂಧಪಟ್ಟವರಿಗೆ ದುಪ್ಪಟ್ಟು ದಂಡ ವಿಧಿಸಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು. ನಾಗರಿಕರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಮಾರುಕಟ್ಟೆ ಮುಂಭಾಗದಲ್ಲಿರುವ ಮಾರಾಟಗಾರರು ಅವರಿಗೆ ಮೀಸಲಾದ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸುವಂತೆ ಕ್ರಮವಹಿಸಬೇಕು. ಈ ಸಂಬಂಧ ಸ್ಥಳಗಳನ್ನು ಗುರುತಿಸಿ, ನಿಗದಿತ ಜಾಗದಲ್ಲಿಯೇ ವ್ಯಾಪಾರ ಮಾಡುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಿಥಿಲಾವಸ್ಥೆ ಶೌಚಾಲಯ ತೆರವುಗೊಳಿಸಿ: ಕೆ.ಆರ್. ಮಾರುಕಟ್ಟೆಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿ, ನೆಲ ಹಾಗೂ ಮೊದಲನೇ ಮಹಡಿಯಲ್ಲಿರುವ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಅನಂತರ ಅವರಣದಲ್ಲಿರುವ ಶಿಥಿಲಾವಸ್ಥೆಯ ಶೌಚಾಲಯವನ್ನು ತೆರವುಗೊಳಿಸಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಆ ಜಾಗವನ್ನು ಬಳಸಿಕೊಳ್ಳುವಂತೆ ತಾಕೀತು ಮಾಡಿದರು.
ನೀರಿನಿಂದ ಸ್ವಚ್ಛಗೊಳಿಸಿ: ಕೆ.ಆರ್. ಮಾರುಕಟ್ಟೆ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಯ ಸಹಾಯದಿಂದ ನೀರಿನ ಮೂಲಕ ಸಂಪೂರ್ಣ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಬೇಕು. ಬಳಿಕ ನಿರಂತರ ಸ್ವಚ್ಛತೆ ಕಾಪಾಡುವಂತೆ ನಿರ್ವಹಣೆ ಕೈಗೊಳ್ಳಬೇಕೆಂದು ತಿಳಿಸಿದರು.
ಲೀಕೇಜ್-ಪ್ರೂಫ್ ಪೇಂಟಿಂಗ್ ಮಾಡಿ: ಕೆ.ಆರ್. ಮಾರುಕಟ್ಟೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಗಾಜುಗಳಿಗೆ ಲೀಕೇಜ್-ಪ್ರೂಫ್ ಪೇಂಟಿಂಗ್ ಮಾಡುವ ಮೂಲಕ ಮಳೆನೀರು ಸೋರದಂತೆ ನೋಡಿಕೊಳ್ಳಬೇಕು. ಸಜ್ಜೆಗಳಿಂದ ನೀರು ಒಳಬಾರದಂತೆ ದುರಸ್ಥಿಗೊಳಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಲೀಕೇಜ್ ಪ್ರೊಫ್ ಪೇಂಟಿಂಗ್ ಮಾಡಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಮೂರನೇ ಮಹಡಿ ಸದ್ಬಳಕೆಯಾಗುವಂತೆ ಯೋಜನೆ ರೂಪಿಸಿ: ಕೆ.ಆರ್. ಮಾರುಕಟ್ಟೆ ಕಟ್ಟಡದ ಮೂರನೇ ಮಹಡಿ ಬಳಕೆಯಾಗದೆ ಇರುವುದನ್ನು ಗಮನಿಸಿ, ಸಂಪೂರ್ಣ ಮಹಡಿ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಯೋಜನೆ ರೂಪಿಸಿ ಹಾಗೂ ಮಾರುಕಟ್ಟೆ ಕಂದಾಯ ಕಚೇರಿ ಹಾಗೂ ತ್ಯಾಜ್ಯ ನಿರ್ವಹಣೆ ಕಚೇರಿ ಸ್ಥಾಪನೆಗೆ ಕ್ರಮ ವಹಿಸಿ ಎಂದು ಹೇಳಿದರು.
ಇತರೆ ಪ್ರಮುಖ ನಿರ್ದೇಶನಗಳು: * ಮಾರುಕಟ್ಟೆ ಕಟ್ಟಡದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಅಳವಡಿಸಿರುವ ಅನುಪಯುಕ್ತ ಫೆನ್ಸಿಂಗ್ ತೆರವುಗೊಳಿಸಿ. * ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸಿ. * ಅನಧಿಕೃತವಾಗಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆರವುಗೊಳಿಸಿ. * ತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಶೆಡ್ ನಿರ್ಮಾಣ ಮಾಡಬೇಕು.
* ಮಾರುಕಟ್ಟೆ ಮುಂಭಾಗದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಸ್ಥಳ ನಿಗದಿಪಡಿಸಿ ಲೈನಿಂಗ್ ಮಾಡಿಕೊಡುವುದು. ನಿಗದಿಪಡಿಸಿದ ಸ್ಥಳ ಬಿಟ್ಟು ಸಂಚಾರಕ್ಕೆ ತೊಂದರೆ ಮಾಡುವ ವ್ಯಾಪಾರಿಗಳಿಗೆ ದಂಡ ವಿಧಿಸಿ. * ವಾರಕ್ಕೊಮ್ಮೆ ನೀರು ನಿಲ್ಲುವ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. * ಮಾರುಕಟ್ಟೆಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕಲ್ಪಿಸಿ ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದರು.
ಈ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್, ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಡಿಜಿಎಂ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Related









