ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ವೇತನ, ಪಿಂಚಣಿ ಸಮಯಕ್ಕೆ ಸರಿಯಾಗಿ ಪಡೆಯುವುದು ನೌಕರರ ಹಕ್ಕು. ಹೀಗಾಗಿ ಸರ್ಕಾರಿ ನೌಕರರ ವೇತನ ಪಿಂಚಣಿ ಪಾವತಿ ವಿಳಂಬವಾದರೆ ಅದಕ್ಕೆ ತಕ್ಕನಾದ ಬಡ್ಡಿಯನ್ನು ಕೂಡ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಸ್ವಲ್ಪ ಕಾಲದವರೆಗೆ ಸರ್ಕಾರದಿಂದ ಪಿಂಚಣಿ ಮತ್ತು ವೇತನ ಮುಂದೂಡಿದ್ದ ಪ್ರಕರಣದಲ್ಲಿ ಶೇ.6ರಷ್ಟು ಬಡ್ಡಿ ನೀಡುವಂತೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಇದೇ ಪ್ರಕರಣದಲ್ಲಿ ಹೈ ಕೋರ್ಟ್ ಶೇ. 12ರಷ್ಟು ಬಡ್ಡಿಯನ್ನು ನಿಗದಿಪಡಿಸಿತ್ತು.
ಕೊರೊನಾ ಸೋಂಕಿನ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ನೌಕರರ ವೇತನ ಮತ್ತು ಪಿಂಚಣಿಯನ್ನು 2020 ರ ಮಾರ್ಚ್ ಏಪ್ರಿಲ್ನಲ್ಲಿ ಸ್ವಲ್ಪ ಸಮಯದವರೆಗೆ ಮುಂದೂಡಿತ್ತು.
ಈ ಬಗ್ಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತಡೆಹಿಡಿಯಲಾಗಿದ್ದ ವೇತನ ಮತ್ತು ಪಿಂಚಣಿ ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ ಸಮಯಕ್ಕೆ ಸರಿಯಾಗಿ ವೇತನ ಪಿಂಚಣಿ ಪಡೆಯುವುದು ನೌಕರರ ಹಕ್ಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆದು ಸರ್ಕಾರ ಪ್ರತಿ ತಿಂಗಳ ಕೊನೆಯ ದಿನಾಂಕದಂದು ನೌಕರರಿಗೆ ವೇತನ, ಪಿಂಚಣಿ ಪಾವತಿಸಬೇಕು ಎಂದು ಹೈ ಕೋರ್ಟ್ ಆದೇಶ ನೀಡಿತ್ತು. ಇನ್ನು ಇಲಾಖೆ ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೌಕರರ ತಪ್ಪಿತಸ್ಥರಾಗಿದ್ದರೆ ಅಂಥವರಿಗೆ ಪಿಂಚಣಿ ನಿಲ್ಲಿಸಬಹುದಾಗಿದೆ ಎಂದು ತಿಳಿಸಿ, ಈಗ ತಡೆ ಹಿಡಿದಿರುವ ಪಿಂಚಣಿಗೆ ಶೇ. 12ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕೆಂದು ಹೈಕೋರ್ಟ್ ಆದೇಶಿಸಿತ್ತು.
ಈ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಆಂಧ್ರ ಪ್ರದೇಶ ಸರ್ಕಾರ ಪ್ರಶ್ನಿಸಿ, ಕೊರೊನಾ ಸಂಕಷ್ಟದಿಂದ ನೌಕರರ ವೇತನ, ಪಿಂಚಣಿ ಮುಂದೂಡಲಾಗಿದೆ ಎಂದು ತಿಳಿಸಿತ್ತು. ಉತ್ತಮ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಸರಕಾರ ಹೇಳಿತ್ತು. ಆದರೆ ಇದನ್ನು ಒಪ್ಪದ ಸುಪ್ರೀಂಕೋರ್ಟ್ ವೇತನ ಮತ್ತು ಪಿಂಚಣಿ ವಿಳಂಬವಾದ ಕಾರಣ ಶೇ. 6ರಷ್ಟು ಬಡ್ಡಿ ಪಾವತಿಸುವಂತೆ ಆದೇಶಿಸಿದೆ.