ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೊರೊನಾದಿಂದ ಮೃತಪಟ್ಟವರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕನ ಆರೋಗ್ಯ ಹದಗೆಟ್ಟಿತ್ತು. ಇತ್ತ ಕೆ.ಆರ್. ಅಸ್ಪತ್ರೆಯಲ್ಲೇ ಮೃತದೇಹಗಳು ಉಳಿದುಕೊಂಡಿದ್ದವು. ಇದನ್ನು ಗಮನಿಸಿದ ನಗರಪಾಲಿಕೆ ಜನನ ಹಾಗೂ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ತಾವೇ ಆಂಬುಲೆನ್ಸ್ ಚಾಲಕನ ಮನೆಗೆ ಕಳುಹಿಸಿ, ತಾನೆ ಆಂಬುಲೆನ್ಸ್ ಚಾಲನೆ ಮಾಡಿ ಶವ ಸಾಗಿಸುವ ಮೂಲಕ ತನ್ನದಲ್ಲ ಕೆಲಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದು! ಮೈಸೂರು ಈ ಮಾನವೀಯ ಘಟನೆಗೆ ಸಾಕ್ಷಿಯಾಗಿದ್ದು, ಅಧಿಕಾರಿಯ ಈ ಕಾರ್ಯಕ್ಕೆ, ಇಡೀ ರಾಜ್ಯದ ಜನರು, ಅಧಿಕಾರಿಗಳು, ಆಂಬುಲೆನ್ಸ್ ಚಾಲಕ ಆಯೂಬ್ ಅಹ್ಮದ್ ಹಾಗೂ ಚಿತಾಗಾರದ ನೌಕರರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಂದು ಕೆಲಸ ಮಾಡುತ್ತಿದ್ದ ಆಂಬುಲೆನ್ಸ್ ಚಾಲಕ ರವಿ, ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಬಳಲಿ ಆಯಾಸಗೊಂಡಿದ್ದರು. ತಕ್ಷಣಕ್ಕೆ ಯಾರೂ ಚಾಲಕರು ಸಿಗಲಿಲ್ಲ. ಹೀಗಾಗಿ, ಪಿಪಿಇ ಕಿಟ್ ಧರಿಸಿದ ಅಧಿಕಾರಿ, ತಾವೇ ಆಂಬುಲೆನ್ಸ್‌ಗೆ ಶವವನ್ನು ಹಾಕಿಕೊಂಡು ಚಿತಾಗಾರಕ್ಕೆ ತೆರಳಿದ್ದಾರೆ. ಬುಧವಾರ ಸಂಜೆವರೆಗೂ 4 ಟ್ರಿಪ್‌ಗಳಲ್ಲಿ ಶವ ಸಾಗಿಸಿದ್ದಾರೆ.
ಕೋವಿಡ್ ಮೊದಲ ಅಲೆ ಸಂದರ್ಭದಿಂದಲೂ, ಕೋವಿಡ್ ಶವ ಸಂಸ್ಕಾರದ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಕ್ರಿಸ್ಟಿ ಇದುವರೆಗೆ 1221ಸೋಂಕಿತರ ಶವಗಳನ್ನು ತಮ್ಮ ಸಾರಥ್ಯದಲ್ಲಿ ವಿಜಯನಗರ 4ನೇ ಹಂತದಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದ್ದಾರೆ.
ಈ ಸಂಬಂಧ ಕ್ರಿಸ್ಟಿ, ಮಾತನಾಡಿ, ಅಂದು ಮೃತರ ಕುಟುಂಬದವರು ದೂರದೂರಗಳಿಂದ ಬಂದು ಕಾಯುತ್ತಿದ್ದರು. ನಾನು ಶವ ಸಾಗಿಸದಿದ್ದರೆ ಅವರೆಲ್ಲ ಮತ್ತೊಂದು ದಿನ ಕಾಯಬೇಕಾಗುತ್ತಿತ್ತು. ಶವ ಸುಡುವವರು ಹಾಗೂ ಆಂಬುಲೆನ್ಸ್ ಚಾಲಕರು ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ಚಾಲಕ ರವಿ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ನಾನೇ ಅವರನ್ನು ಮನೆಗೆ ಕಳುಹಿಸಿದೆ. ಇತ್ತ ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚು ಮೃತ ದೇಹಗಳು ಇದ್ದವು. ಹೊರಗೆ, ಮೃತರ ಕುಟುಂಬದವರು ಕೂಡ ಕಾಯುತ್ತಿದ್ದರು. ಹೀಗಾಗಿ, ಈ ಕೆಲಸಕ್ಕೆ ನಾನೇ ಮುಂದಾದೆ ಎಂದು ತಿಳಿಸಿದ್ದಾರೆ.