ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಬೆಂಗಳೂರಿನ ಐಐಎಸ್ಸಿ ಸಂಶೋಧನೆಗೆ ಸಂಬಂಧಿಸಿದ ಪಟ್ಟಿಯಲ್ಲಿ ವಿಶ್ವದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಲಂಡನ್ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್ ನಡೆಸಿದ ವಿಶ್ಲೇಷಣೆಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರತಿ ಬೋಧಕವರ್ಗದ ವಿಚಾರವಾಗಿ 100 ರಲ್ಲಿ 100 ಅಂಕಗಳನ್ನು ಪಡೆದು ಮೊದಲ ಸ್ಥಾನಕ್ಕೇರಿದೆ.
ಈ ಮೂಲಕ ಉದ್ಯಾನ ನಗರಿಯಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಜತೆಗೆ ಭಾರತದ ಮೂರು ವಿಶ್ವವಿದ್ಯಾಲಯಗಳು ಕ್ಯೂ.ಎಸ್. ವಿಶ್ವವಿದ್ಯಾಲಯ ಶ್ರೇಯಾಂಕ 2022ರ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಜಾಗತಿಕ ಅಂತಾರಾಷ್ಟ್ರೀಯ ಶ್ರೇಯಾಂಕಗಳ 18 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಬೆಂಗಳೂರಿನ ವಿಜ್ಞಾನ ಸಂಸ್ಥೆ ಸೋಧನೆಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದ 200 ಬೆಸ್ಟ್ ವಿವಿಗಳ ಪೈಕಿ ಐ.ಐ.ಟಿ. ಬಾಂಬೆ 177 ನೇ ಸ್ಥಾನವನ್ನು ಗಳಿಸಿದೆ. ಐ.ಐ.ಟಿ. ದಿಲ್ಲಿ 185 ನೇ ಸ್ಥಾನ ಪಡೆದಿದೆ ಮತ್ತು ಐಐಎಸ್ಸಿ ಬೆಂಗಳೂರು, ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ 186 ನೇ ಸ್ಥಾನ ಪಡೆದಿದೆ.
ಭಾರತದ ಶಿಕ್ಷಣ ಸಂಸ್ಥೆಗಳು ಮಾಡಿರುವ ಸಾಧನೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ಅಭಿನಂದಿಸಿದ್ದಾರೆ. ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಡುತ್ತಿದೆ ಮತ್ತು ಅದು ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ. ನಾವು ಗುರುವಿನಂತಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಂದಿರುವ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತೇವೆ, ಅವರು ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಭಾರತೀಯ ಶಿಕ್ಷಣ ವಲಯದ ಇತರ ಎಲ್ಲಾ ಭಾಗೀದಾರರ ಕಲ್ಯಾಣದ ಬಗ್ಗೆ ನಿರಂತರ ಚಿಂತಿಸುತ್ತಿರುತ್ತಾರೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ.
ಟ್ವೀಟ್ ಮೂಲಕ ಪ್ರಧಾನಿ ಅಭಿನಂದನೆ
ವಿಶ್ವದ ವಿವಿಗಳ ರ‍್ಯಾಂಕ್‌ನಲ್ಲಿ ಸ್ಥಾನ ಪಡೆದಿರುವ ಭಾರತದ ಮೂರು ಸಂಸ್ಥೆಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು, ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಜಾಗತಿಕ ಶ್ರೇಷ್ಠತೆಯನ್ನು ಸಾಧಿಸಬೇಕು ಮತ್ತು ಯುವಕರಲ್ಲಿ ಬೌದ್ಧಿಕ ಪರಾಕ್ರಮವನ್ನು ಬೆಂಬಲಿಸುವ ಪ್ರಯತ್ನಗಳು ಭಾರತದಲ್ಲಿ ನಡೆಯುತ್ತಿವೆ ಎಂದು ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಜಾಗತಿಕ ಸ್ಪರ್ಧಿಗಳಿಗೆ ಹೋಲಿಸಿದರೆ ಭಾರತೀಯ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನಾ ಪರಿಣಾಮವನ್ನು ಸುಧಾರಿಸಿದೆ. ಶ್ರೇಯಾಂಕಗಳ ಪ್ರಕಾರ, ಭಾರತದ 35 ವಿಶ್ವವಿದ್ಯಾಲಯಗಳಲ್ಲಿ ಹದಿನೇಳು ವಿವಿಗಳ ಸ್ಕೋರ್‌ನಲ್ಲಿ ಏರಿಕೆಯಾಗಿದೆ.