ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಒಂದೆರಡು ದಿನಗಳಲ್ಲಿ ತಾರ್ಕಿಕ ಅಂತ್ಯ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಸಿಂಗ್ ಅವರನ್ನು ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಸ್ವಾಗತಿಸಿದರು. ಬಳಿಕ ಕುಮಾರಕೃಪಾಕೆ ತೆರುಳುವಾಗ ಸುದ್ದಿಗಾರರೊಂದಿಗೆ ಮಾತನಾಡಿ ಸಿಂಗ್, ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ಕೊಡದೆ ಪಕ್ಷದ ಕಾರ್ಯಕರ್ತರು ಮುಖಂಡರ ಮುಂದಿನ ಕಾರ್ಯಕ್ರಮದ ಬಗ್ಗೆ ಮಾತ್ರವೇ ತಿಳಿಸಿದರು.
ಸಂಜೆ 5 ಗಂಟೆಗೆ ಸಿಂಗ್ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲಿ ಸಭೆ ನಡೆಯುತ್ತಿದೆ. ಇದು ಭಾರಿ ಕುತೂಹಲ ಮೂಡಿಸಿದ್ದು, ಹಿಂದಿನ ಸಭೆ ಕಾಫಿ-ತಿಂಡಿಗಷ್ಟೇ ಸೀಮಿತವಾಗುತ್ತಾ? ಇಲ್ಲ ಮಸ್ಯೆ ಇರುವ ಸಚಿವರು, ಶಾಸಕರು ಸಿಎಂ ಮುಂದೆ ದೈರ್ಯವಾಗಿ ಸಮಸ್ಯೆ ಬಗ್ಗೆ ಉಸ್ತುವಾರಿಗೆ ಹೇಳುತ್ತಾರಾ? ಎಲ್ಲಾ ಸಚಿವರು ಈ ಸಭೆಗೆ ಆಗಬೇಕೆಂದು ಸೂಚಿಸಿದ್ದು, ಸಿ.ಪಿ.ಯೋಗೇಶ್ವರ್ ಸಭೆಗೆ ಬರುತ್ತಾರಾ? ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
ಜೊತೆಗೆ ಸರ್ಕಾರದ ವಿರುದ್ಧ ಹೇಳಿಕೆ ಕೊಡುತ್ತಿರುವ ಸಚಿವರ ಸಮಸ್ಯೆಯನ್ನು ಸಿಂಗ್ ಆಲಿಸಲಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಚಿವರ ನಡುವಿನ ಗೊಂದಲಕ್ಕೆ ಇಂದಿನ ಸಭೆಯಲ್ಲಿ ಪರಿಹಾರ ಸಿಗದಿದ್ದರೆ ನಾಳೆ (ಗುರುವಾರ) ಸಚಿವರು ಸಿಎಂ ಅನುಪಸ್ಥಿತಿಯಲ್ಲಿ ಪ್ರತ್ಯೇಕವಾಗಿ ಅರುಣ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.