ಪಿರಿಯಾಪಟ್ಟಣ: ಬಲಿಷ್ಠ ಭಾರತದ ನಿರ್ಮಾಣದ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದ್ದು ಅವರ ಆರೋಗ್ಯವನ್ನು ಕಾಪಾಡಲು ಸರ್ಕಾರ ಕಟಿಬದ್ಧವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ತಿಳಿಸಿದರು.
ಪಟ್ಟಣದ ಮಹಾರಾಜ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಾದ್ಯಂತ ಕೊರೊನಾ ವೈರಸ್ ಸಮಸ್ಯೆಯಿಂದ ಜನತೆ ನಲುಗಿದ್ದು, ಜೀವವಿದ್ದರೆ ಮಾತ್ರ ಜೀವನ ಎಂದು ಭಾವಿಸಿ ಉತ್ತಮ ಆರೋಗ್ಯಕ್ಕಾಗಿ ಪರಿತಪಿಸುತ್ತಿದ್ದಾರೆ. ಇಂಥ ಸಂದಿಗ್ದ ಸಮಯದಲ್ಲಿ ದೇಶದಾದ್ಯಂತ ಮುಚ್ಚಿರುವ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಿದ್ದು ಅದಕ್ಕಾಗಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಮುಂದಾಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತಾನಾಡಿ, ದಾನಿಗಳು ಹಾಗೂ ಸ್ನೇಹಿತರ ಸಹಾಯದಿಂದ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಕ್ಸಿಜನ್, ಬೆಡ್, ಕಾನ್ಸಂಟ್ರೇಟರ್, ಔಷಧ ಮಾತ್ರೆಗಳನ್ನು ನೀಡುವುದಾಗಿ ತಿಳಿಸಿದರು.
ಪುರಸಭಾ ಸದಸ್ಯ ರವಿ ಮಾತನಾಡಿ, ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಆಂಬ್ಯುಲೆನ್ಸ್ ಗಳ ಕೊರತೆಯಿದ್ದು ತಾಲೂಕು ಆಡಳಿತ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾರ್ವಜನಿಕರಿಗೆ ಔಷಧ ಕಿಟ್ ಗಳನ್ನು ವಿತರಿಸಲಾಯಿತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ ಶ್ರೀನಿವಾಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಲತಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಎಂ.ಎ. ಲತಾ, ಸಿ.ಎಸ್ ಗೀತಾ, ಡೇಟಾ ಆಪರೇಟರ್ ಗಳಾದ ಸಂದೀಪ್, ನಿತಿನ್, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ನಾಗರಾಜ್, ವೆಂಕಟೇಶ್ವರ, ಹಬಟೂರು ರಘು, ಪದಾಧಿಕಾರಿಗಳಾದ ರಕ್ಷಿತ್, ಮಕ್ಸೂದ್, ಮಂಜು, ಸಂಸ್ಥೆಯ ಪ್ರಾಂಶುಪಾಲ ದಿನೇಶ್, ಕಾಲೇಜು ಸಿಬ್ಬಂದಿ ಇದ್ದರು.