ಬೆಂಗಳೂರು: ಬಳಿಕ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಆಧುನಿಕ ಯುಗದ ಶ್ರೇಷ್ಠ ಸಂತ, ಚಿಂತಕರಲ್ಲಿ ಒಬ್ಬರು. ಅವರು ಭಾರತದ ಕೋಟ್ಯಂತರ ಯುವ ಜನರಿಗೆ ಸ್ಫೂರ್ತಿ. ಅವರ ಜೀವನ, ಅವರು ತೋರಿದ ಸನ್ಮಾರ್ಗಗಳು ಭಾರತೀಯರಿಗೆ ಆದರ್ಶಪ್ರಾಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಅಂಗವಾಗಿ ಇಂದು ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಿವೇಕಾನಂದರು ತಮ್ಮ ಜೀವದಲ್ಲಿ ಶಿಕಾಗೊದ ವಿಶ್ವ ಧರ್ಮ ಸಮ್ಮೇಳನದಲ್ಲಿ(1893) ನೀಡಿದ ಭಾಷಣದಿಂದಾಗಿ ಹಿಂದೂ ಧರ್ಮವು ವಿಶ್ವಕ್ಕೆ ಪರಿಚಿತವಾಯಿತು. ಹಿಂದೂ ಪರಂಪರೆಯು ಭಾರತದ ಗಡಿಗಳನ್ನು ದಾಟಿ ವಿಶ್ವಕ್ಕೆ ಮುಟ್ಟಿತು. ಅವರ ಆಶಯಗಳು, ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಯುವ ಸಮೂಹವು ಇಂದಿಗೂ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವಿವೇಕಾನಂದ ಅವರ ಕಾಯಕಗಳು ಆದರ್ಶಪ್ರಾಯವಾಗಿವೆ. ಅವರ ಮಾತುಗಳು ಚಿನ್ನದ ತೂಕಕ್ಕೆ ಸಮ. ಅವರ ಆಲೋಚನೆಗಳು ಭಾರತೀಯರ ವೈವಿದ್ಯಮಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅವರ ವಿವೇಕಯುತ ಮಾತುಗಳು ಭಾರತವನ್ನೂ ಮೀರಿ ಹೊರ ದೇಶಗಳಿಗೂ ಪಸರಿಸಿದೆ ಎಂದರು.
ವಿಶ್ವ ಸಂಸ್ಕೃತಿಯ ಪ್ರತಿನಿಧಿಗಳಲ್ಲಿ ಭಾರತವನ್ನು ಪ್ರತಿನಿಧಿಸುವವರು ವಿವೇಕಾನಂದರಲ್ಲದೆ ಇನ್ಯಾರೂ ಅಲ್ಲ. ವಿವೇಕಾನಂದರು ವೃತ್ತಿಪರ ದಾರ್ಶನಿಕರಲ್ಲ. ಅವರು ಬೇರೆಯವರಂತೆ ಆಧುನಿಕ ಭಾರತೀಯ ಭವಿಷ್ಯವನ್ನು ನಿರ್ಧರಿಸಿದರು. ಅವರು ವೃತ್ತಿಪರ ರಾಜಕಾರಣಿಯಲ್ಲ ಆದರೂ ಅವರ ಮಾತುಗಳು ರಾಜಕಾರಣಿಗಳ ಕಣ್ಣು ತೆರೆಸಿವೆ. ದೇಶದ ರಾಷ್ಟ್ರೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿದರು.
ಕೋಟ್ಯಂತರ ಜನರನ್ನು ಪ್ರೇರೇಪಿಸಿದ, ಸ್ಫೂರ್ತಿ ತುಂಬಿದ, ಸಾಂತ್ವನ ನೀಡಿದ ಸ್ವಾಮಿ ವಿವೇಕಾನಂದ ಅವರ ನಿಜವಾದ ಹೆಸರು ನರೇಂದ್ರ ನಾಥ ದತ್ತ. ಅವರ ಜೀವನದ ಕಥೆಯು ಆಸಕ್ತಿದಾಯಕವಾಗಿದೆ. ನರೇಂದ್ರನಿಂದ ವಿವೇಕರಾದ ಅವರ ಬದುಕಿನ ದಾರಿಯು ಕೊನೆಯಿಲ್ಲದ ಪಾಠಗಳನ್ನು ಹೇಳುತ್ತದೆ. ವಿವೇಕಾನಂದ ಅವರದು ಪರಿಪೂರ್ಣ ವ್ಯಕ್ತಿತ್ವ. ಒಬ್ಬ ಮಹಾನ್ ಗುರು, ಶಸ್ತ್ರಾಸ್ತ್ರಗಳಿಲ್ಲದ ಯೋಧ ಎಂದು ಬಣ್ಣಿಸಿದರು.