ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದ್ದು, ಭಾರತ ಮಹಿಳೆಯರ ಹಾಕಿ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್ ತಲುಪಿದೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಭಾರತದ ವನಿತೆಯರ ತಂಡ 1-0 ಗೋಲಿನ ಅಂತರದಲ್ಲಿ ವಿರೋಚಿತ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿದೆ.
ಪಂದ್ಯದ ಎರಡನೇ ಕ್ವಾರ್ಟರ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಬಾರಿಸಿದ ಗೋಲ್ ಸಹಾಯದಿಂದಲೇ ಆಸ್ಟ್ರೇಲಿಯಾ ತಂಡವನ್ನು ಭಾರತ ಮಹಿಳಾ ತಂಡ ಸದೆಬಡಿಯಿತು. ಇದರಿಂದ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಾತರಿಯಾಯಿತು.
40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಇತಿಹಾಸದಲ್ಲಿಯೇ ಇದುವರೆಗೂ ಭಾರತೀಯ ವನಿತೆಯರ ಹಾಕಿ ತಂಡ ಯಾವುದೇ ಒಲಿಂಪಿಕ್ಸ್ನಲ್ಲಿಯೂ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾರತ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದ್ದು ಎಲ್ಲೆಡೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಪೂಲ್ ಹಂತದ ಮೊದಲ 3 ಪಂದ್ಯಗಳಲ್ಲಿ ಸತತವಾಗಿ ಸೋಲುವುದರ ಮೂಲಕ ಭಾರೀ ನಿರಾಸೆಯನ್ನು ಹುಟ್ಟುಹಾಕಿದ್ದ ಭಾರತೀಯ ವನಿತೆಯರ ಹಾಕಿ ತಂಡ ಕ್ರೀಡಾಕೂಟದಲ್ಲಿ ನಿರಾಶೆ ಅನುಭವಿಸಲಿದೆ ಎಂದು ಟೀಕಿಸಲಾಗಿತ್ತು.
ಆದರೆ ಬಳಿಕದ 2 ಪಂದ್ಯಗಳಲ್ಲಿ ಫೀನಿಕ್ಸ್ ನಂತೆ ಎದ್ದುಬಂದ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿತು. ಇಂದು ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಆಸಿಸ್ ತಂಡವನ್ನೂ ಮಣಿಸಿ ಸೆಮೀಸ್ ಹಂತಕ್ಕೇರಿದೆ.
ಒಲಂಪಿಕ್ಸ್ -ದ್ಯುತಿ ಚಾಂದ್ ಸೆಮಿ ಫೈನಲ್ ಗೇರುವಲ್ಲಿ ವಿಫಲ: ಭಾರತದ ಮತ್ತೊಂದು ಪದಕದ ಆಸೆ ಭಗ್ನ