ನ್ಯೂಡೆಲ್ಲಿ: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರಬಲ ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿರುವ ಭಾರತ ವನಿತೆಯರ ಹಾಕಿ ತಂಡಕ್ಕೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಭಾರತ ವನಿತೆಯರ ಹಾಕಿ ತಂಡ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಹಲವಾರು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದು, ತಂಡಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಟ್ವಿಟರ್ ಮಾಡಿರುವ ಪ್ರಧಾನಿ ಮೋದಿ ಕ್ರೀಡಾಕೂಟದಲ್ಲಿ ಭಾರತ ವನಿತೆಯರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ 130 ಕೋಟಿ ಜನರ ಕನಸನ್ನು ಸಾಕಾರಗೊಳಿಸುವತ್ತ ದಾಪುಗಾಲಿರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ವನಿತೆಯರ ತಂಡದ ಐಸಿಹಾಸಿಕ ಸಾಧನೆಯನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನಿಜಕ್ಕೂ ಕನಸು ಸಾಕಾರಗೊಂಡ ಕ್ಷಣವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಬೇರಿ ಒ ಫಾರೆಲ್ಲ್ ಅವರೂ ಕೂಡ ಭಾರತ ತಂಡದ ಜಯಕ್ಕೆ ಶುಭ ಕೋರಿದ್ದು, ನಿಜಕ್ಕೂ ಇದೊಂದು ಕಠಿಣ ಪಂದ್ಯವಾಗಿತ್ತು. ಅಂತಿಮ ಕ್ಷಣದ ವರೆಗೂ ನಿಮ್ಮ ರಕ್ಷಣಾಕೋಟೆ (ಗ್ರೇಟ್ ವಾಲ್ ಆಫ್ ಇಂಡಿಯಾ)ಯನ್ನು ತಮ್ಮ ತಂಡ ಭೇದಿಸಲು ಸಾಧ್ಯವಾಗಲಿಲ್ಲ. ಶುಭವಾಗಲಿ ಎಂದು ಹಾರೈಸಿದ್ದಾರೆ.
ಒಲಂಪಿಕ್ಸ್ – ಭಾರತಕ್ಕೆ ಮತ್ತೊಂದು ಪದಕ ಖಾತ್ರಿ: ಸೆಮಿಫೈನಲ್ ಪ್ರವೇಶಿಸಿದ ಮಹಿಳೆಯರ ಹಾಕಿ ತಂಡ