ಬೆಂಗಳೂರು: ರ್ನಾಟಕದಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಕರಾವಳಿ, ಮಲೆನಾಡು, ಕೊಡಗು ಸೇರಿದಂತೆ ಬಹುತೇಕ ಭಾಗಗಳಲ್ಲಿ ಎರಡು ದಿನ ಮಳೆ ಅಬ್ಬರಿಸಲಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಆರ್ಭಟ ಹೆಚ್ಚಾಗಲಿದ್ದು, ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಉಂಟಾಗಿರುವುದರಿಂದ ಇನ್ನೆರಡು ದಿನ ಕರ್ನಾಟಕದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಶಿವಮೊಗ್ಗ, ಕೊಡಗು, ರಾಮನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯಲ್ಲಿ ಪ್ರಬಲ ಮಾರುತಗಳ ಪ್ರಭಾವದಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಕಳೆದೊಂದು ವಾರದಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲೂ ಇಂದು ಮೋಡ ಕವಿದ ವಾತಾವರಣ ವಿರಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಕರ್ನಾಟಕದಲ್ಲಿ 7ರಿಂದ 11 ಸೆ.ಮೀ. ಮಳೆಯಾಗುವ ಸಾಧ್ಯತೆಯಿದೆ. ಇಂದು ಗುಡುಗು, ಸಿಡಿಲು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ವಾಡಿಕೆಗಿಂತ ಈಗಾಗಲೇ ಶೇ. 48ರಷ್ಟು ಮಳೆ ಕಡಿಮೆಯಾಗಿದೆ. ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಮಳೆಯಾಗುತ್ತಿದ್ದು, ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಆ. 20ರವರೆಗೂ ಮಳೆಯ ಆರ್ಭಟ ಮುಂದುವರಿಯಲಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಹೆಚ್ಚಾಗಲಿದ್ದು, ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಕೂಡ ಇಂದು ಮಳೆ ಮುಂದುವರಿಯಲಿದೆ. ಈಗಾಗಲೇ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಮಳೆಯಾಗಿದೆ.
ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇತ್ತ ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆಯಿದೆ. ಈ ಬಾರಿ ಕೊಡಗಿನ ಮಡಿಕೇರಿ, ವಿರಾಜಪೇಟೆ, ಸೋಮವಾರ ಪೇಟೆ ಮುಂತಾದ ಕಡೆಗಳಲ್ಲಿ ಕಳೆದ ವರ್ಷಗಳಿಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ತುಂಗಭದ್ರಾ ಹಾಗೂ ಘಟಪ್ರಭಾ ಜಲಾಶಯದಲ್ಲಿ ನೀರು ಭರ್ತಿಯಾಗಿದೆ.
ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಒರಿಸ್ಸಾ, ಬಿಹಾರ, ತೆಲಂಗಾಣ, ಜಾರ್ಖಂಡ್, ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಇಂದು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವಿಪರೀತ ಮಳೆಯಾಗುವ ನಿರೀಕ್ಷೆಯಿದೆ. ಉಕ್ಕಿ ಹರಿಯುತ್ತಿದ್ದ ಗಂಗಾ ನದಿಯ ನೀರಿನ ಮಟ್ಟ ನಿನ್ನೆಯಿಂದ ಕೊಂಚ ತಗ್ಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕೂಡ ಇನ್ನೆರಡು ದಿನ ಮಳೆಯಾಗಲಿದೆ. ತೆಲಂಗಾಣ ಹಾಗೂ ಒರಿಸ್ಸಾದ ಕರಾವಳಿ ಪ್ರದೇಶಗಳಲ್ಲಿ ಇನ್ನೆರಡು ದಿನ ಮಳೆ ಮುಂದುವರೆಯಲಿದೆ.
ಜುಲೈ ತಿಂಗಳ ಅಂತ್ಯದಲ್ಲಿ ಸುರಿದ ಭಾರೀ ಮಳೆಯಿಂದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆ ಮಳೆಯಿಂದ ಕರ್ನಾಟಕದ 13 ಜಿಲ್ಲೆಗಳಲ್ಲಿ 2.3 ಲಕ್ಷ ಹೆಕ್ಟೇರ್ ಬೆಳೆ ಹಾನಿ ಉಂಟಾಗಿದೆ.
ಮಳೆಯ ಹೊಡೆತಕ್ಕೆ 10,538 ಮನೆಗಳು ಹಾನಿಯಾಗಿವೆ. ವಿದ್ಯುತ್ ಕಂಬಗಳು, ಸೇತುವೆಗಳು ಮುರಿದು ಬಿದ್ದು ಕೋಟ್ಯಂತರ ರೂ. ನಷ್ಟವಾಗಿದೆ. ಹಲವಾರು ಜನರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ವರ್ಷದ ಪ್ರವಾಹದಲ್ಲಿ ಕರ್ನಾಟಕದ 14 ಜನರು ಸಾವನ್ನಪ್ಪಿದ್ದಾರೆ. ಭಾರೀ ಪ್ರವಾಹದಿಂದ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ ಸೇರಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೆಚ್ಚು ನಷ್ಟವಾಗಿದೆ. ಮಲೆನಾಡಿನಲ್ಲಿ ಒಂದು ವಾರದಿಂದ ಬಿಡದೆ ಮಳೆಯಾಗುತ್ತಿದೆ.