ಮದ್ದೂರು: ತಾಲೂಕಿನ ಕಾಡುಕೊತ್ತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಕಾಡುಕೊತ್ತನಹಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ (Pratibha Karanji) ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿ ಎಚ್.ಜಿ.ನಾಗರಾಜು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರತಿಭೆಯನ್ನು ಕೇವಲ ಪಠ್ಯ ಪುಸ್ತಕಗಳು ಹಾಗೂ ಅಂಕಗಳಿಂದ ನೋಡದೆ, ಪಠೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗುರುತಿಸಿದರೆ ಪ್ರತಿಭಾನ್ವಿತರಿಗೆ ಅವಕಾಶ ಸಿಗಲಿದೆ. ಅಂಥ ವೇದಿಕೆಯೇ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ ಎಂದರು.
ಇನ್ನು ಈ ವೇದಿಕೆಯಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮವಾದ ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ದೇಶದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಆದರೆ, ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರಹೊಮ್ಮುವ ವೇದಿಕೆಯನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಅಪಾರವಾಗಿದ್ದು, ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿ ಪ್ರದರ್ಶಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕ್ಲಸ್ಟರ್‌ನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ತಮ್ಮ ತಮ್ಮ ಶಾಲೆಯ ಮಕ್ಕಳನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಕರೆ ತಂದಿದ್ದರು. ಕಿರಿಯ, ಹಿರಿಯ ವಿಭಾಗ, ಪ್ರೌಢ ವಿಭಾಗ ಹೀಗೆ ಅನೇಕ ವಿಭಾಗಗಳಲ್ಲಿ ಮಕ್ಕಳ ವೈಯಕ್ತಿಕ ಹಾಗೂ ಸಾಮೂಹಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು .ಈ ಕಾರ್ಯಕ್ರಮಕ್ಕೆ ಕ್ಲಸ್ಟರ್‌ನ ಎಲ್ಲ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು, ಈ ಸಂದರ್ಭದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಗೌರವಿಸಲಾಯಿತು.