ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಬೃಹತ್ ಸೈಕಲ್ ಜಾಥಾ ಇಂದಿಗೆ 10ನೇ ದಿನಕ್ಕೆ ಕಾಲಿಟ್ಟಿದ್ದು ಬೀದರ್ ಕಡೆಗೆ ಸಾಗುತ್ತಿದೆ.
ಈ ನಡುವೆ ನಿನ್ನೆ ಮಾರ್ಗಮಧ್ಯೆ ಸೇಡಂ ಹತ್ತಿರ ಸೇಡಂ ಘಟಕದ ಸಹೋದ್ಯೋಗಿಗಳು ಮಂಗಳವಾರ ಸೈಕಲ್ ಜಾಥಾ ನಿರತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು.
ಇನ್ನು ನಿನ್ನೆ ಮುಂಜಾನೆ ಗೌಡನಹಳ್ಳಿ ಗ್ರಾಮದ ಬೋಜಲಿಂಗೆಶ್ವರ ದೇವಸ್ಥಾನದಿಂದ ಹೊರಟ ಜಾಥಾ ರಾತ್ರಿವೇಳೆಗೆ ಸುಲೆಪೇಟೆ ತಲುಪಿ, ಇಲ್ಲಿನ ಕಟ್ಟಂಗೇಶ್ವರ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿತು. ಇಂದು ಮುಂಜಾನೆ ಮತ್ತೆ ಜಾಥಾ ಆರಂಭವಾಗಿದ್ದು ಈಗಾಗಲೇ 12 ಕಿಮೀ ಕ್ರಮಿಸಿ ಚಿಚ್ಚೋಳಿ ಘಟಕದಲ್ಲಿ ನೌಕರರನ್ನು ಭೇಟಿ ಮಾಡಿ ಬೀದರ್‌ನತ್ತ ಸಾಗಿದೆ.
ಇದೇ ಅಕ್ಟೋಬರ್ 21ರಂದು ಬೀದರ್ ತಲುಪಲಿದ್ದು, ಅಲ್ಲಿನ ನೌಕರರು ಅದ್ದೂರಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಪಾದಯಾತ್ರೆಗೆ ಬಹುತೇಕ ಎಲ್ಲ ನೌಕರರ ಸಂಘಟನೆಗಳ ಪಾಧಿಕಾರಿಗಳು, ಪ್ರಮುಖ ನಾಯಕರ ಜತೆಗೆ ಕನ್ನಡಪರ ವಿವಿಧ ಸಂಘಟನೆಗಳು ಭಾಗವಹಿಸುವ ಮೂಲಕ ಬೆಂಬಲ ಸೂಚಿವೆ.
ಅಕ್ಟೋಬರ್ 10ರಿಂದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ಆರಂಭವಾಗಿರುವ ಸೈಕಲ್ ಜಾಥಾ ರಾಜ್ಯದ ಮೂಲೆ ಮೂಲೆಯನ್ನು ತಲುಪಿ ಸಾರಿಗೆ ನೌಕರರ ಸಮಸ್ಯೆಯನ್ನು ಜನರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದೆ. ಈ ನಡುವೆ ಜಿಲ್ಲಾ ಕೇಂದ್ರಗಳಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೂರಾರು ನೌಕರರು ಸಾಥ್ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
ಇನ್ನು ಈಗಾಗಲೇ ಬಳ್ಳಾರಿ ಡಿಸಿ, ರಾಯಚೂರು ಡಿಸಿ ಮತ್ತು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಈಗ ಬೀದರ್‌ನತ್ತ ಹೊರಟಿರುವ ಜಾಥಾ ಅಲ್ಲಿಯೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನೌಕರರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಿದೆ.