ಕೋಲಾರದಲ್ಲಿ ಸಾರಿಗೆ ನೌಕರರ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಕರಿಸಿದ ದೃಶ್ಯ
ಕೋಲಾರ: ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಸಾರಿಗೆ ನೌಕರರು ಐಕ್ಯತೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ದೃಶ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವಂತಿದೆ.
ಹೌದು ! ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್ ಸೈಕಲ್ ಜಾಥಾವು ಇಂದಿಗೆ 47ನೇ ದಿನಕ್ಕೆ ಕಾಳಿಟ್ಟಿದ್ದು ಕೋಲಾರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ.
ಈ ಸೈಕಲ್ ಜಾಥಾ ಕಳೆದ 46ದಿನಗಳಿಂದ ಬಳ್ಳಾರಿ, ಹೊಸಪೆಟೆ, ಕಲಬುರಗಿ, ಬೀದರ್, ದಾವಣಗೆರೆ, ಚಿತ್ರದುರ್ಗ, ಹುಬ್ಬಳಿ, ವಿಜಯಪುರ, ತುಮಕೂರು ಸೇರಿದಂತೆ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿದ್ದು, ಹೋದೆಡೆಯಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ಸೈಕಲ್ ಜಾಥಾದ ಜತೆಗೆ ಪಾದಯಾತ್ರೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದೆ.
ಇನ್ನು ಈ ಸೈಕಲ್ ಜಾಥಾ ಸಂಚರಿಸಿರುವ ಜಿಲ್ಲೆಗಳಲ್ಲಿ ಸಾರಿಗೆ ನೌಕರರು ನಾ ಆ ಸಂಘಟನೆ ಈ ಸಂಘಟನೆಯವನು ಎಂಬುದನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಒಂದೆಡೆ ಸೇರಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅದರಂತೆ ಇಂದು ಕೋಲಾರದಲ್ಲಿ ಸಾವಿರಾರು ಸಾರಿಗೆ ನೌಕರರು ಸೇರುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆ ದೃಶ್ಯ ನೋಡುತ್ತಿದ್ದರೆ ಮತ್ತೆ ನೌಕರರು ಒಂದಾಗಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ ಎಂಬ ಸಂದೇಶವನ್ನು ಮತ್ತೆ ಮತ್ತೆ ಸಾರುತ್ತಿರುವಂತೆ ಕಾಣಿಸುತ್ತಿದೆ.
ಇಂದು ಕೋಲಾರದಲ್ಲಿ ನಡೆಯುತ್ತಿರುವ ಮೊದಲ ಹಂತದ ಎರಡನೆಯ ಬೃಹತ್ ಸಾರಿಗೆ ನೌಕರರ ಸಮಾವೇಶಕ್ಕೆ ಬರುವ ಸಲುವಾಗಿಯೇ ತಮ್ಮದೆ ನಿಗಮದ ಬಸ್‌ಗಳನ್ನು ಸಾರಿಗೆ ನೌಕರರು ಬುಕ್ ಮಾಡಿದ್ದು, ರಾಜ್ಯದ ವಿವಿಧ ಘಟಕಗಳಿಂದ ಬಸ್‌ಗಳು ಸಾರಿಗೆ ನೌಕರರನ್ನು ಹೊತ್ತು ಕೋಲಾರಕ್ಕೆ ಈಗಾಗಲೇ ಬಂದಿವೆ.