ವಿಜಯಪುರ: ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ 40 ಸಾವಿರ ರೂ.ಗೂ ಹೆಚ್ಚಿನ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಮರಳಿ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.
ನಗರ ಸಾರಿಗೆ ಅನುಸೂಚಿ ಸಂಖ್ಯೆ 57 ರಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುದ್ದೆಬಿಹಾಳದ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಎಂಬುವರು ಭಾನುವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದಾರೆ ಆದರೆ ಇಳಿಯುವಾಗ ತಾವು ತಂದಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳಿದ್ದ ಪರ್ಸ್ ಮರೆತು ಬಿಟ್ಟು ಹೋಗಿದ್ದರು.
ಸೀಟ್‌ನಲ್ಲಿ ಪರ್ಸ್ ಇರುವುದನ್ನು ಗಮನಿಸಿದ ನಿರ್ವಾಹಕ ಐ.ಎ. ಮನಿಯಾರ ಅವರು ಪರ್ಸ್ ತೆಗೆದುಕೊಂಡು ಚಾಲಕ ಎ. ಐ. ಅಮರಣವರ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಆ ಪರ್ಸ್ ಯಾರದಿರಬಹುದೆಂದು ಯೋಚಿಸಿ, ಪತ್ತೆ ಹಚ್ಚಲು ಮುಂದಾದರು.
ಆಗ ಪರ್ಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಬ್ಯಾಂಕ್ ಪಾಸ್‌ಪುಸ್ತಕ ಇತ್ತು. ಅದರಲ್ಲಿ ಒಂದು ಪೋನ್ ನಂಬರ್ ಬರೆಯಲಾಗಿತ್ತು. ಆ ಫೋನ್ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿ ಬರಹೇಳಿದ್ದಾರೆ. ಬಳಿಕ ಆ ಪರ್ಸ್‌ಅನ್ನು ವಿಭಾಗದ ಭದ್ರತಾ ಅಧಿಕಾರಿ ಸಂಜೀವ್ ಕುಮಾರ್ ಅವರ ಸಮ್ಮುಖದಲ್ಲಿ ವಾರಸುದಾರ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಅವರಿಗೆ ಹಸ್ತಂತರಿಸಿದರು.
ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಈ ವೇಳೆ ಮಾತನಾಡಿ, ನಾನು 40 ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಎಲ್ಲಿ ಕಳೆದುಕೊಂಡೆ ಎಂಬ ಚಿಂತೆಯಲ್ಲಿದ್ದೆ ಆ ವೇಳೆ ನನಗೆ ಫೋನ್ ಬಂದಿದ್ದು ನೀವು ಕಳೆದುಕೊಂಡಿರುವ ಬಂಗಾರವಿದ್ದ ಪರ್ಸ್ ಸಿಕ್ಕಿದೆ ತೆಗೆದುಕೊಂಡು ಹೋಗಬನ್ನಿ ಎಂದು ಹೇಳಿದರು.
ಆಗ ನನಗೆ ಹೋದ ಜೀವ ಮತ್ತೆ ಬಂದಂತಾಯಿತು. ನಾವು ಕಷ್ಟಪಟ್ಟು ದುಡಿದು ತೆಗೆದುಕೊಂಡಿದ್ದ ವಸ್ತುಗಳು ಕಳೆದುಕೊಂಡೆ ಎಂದು ದುಃಖಿತಳಾಗಿದ್ದೆ. ಆದರೆ ಅದನ್ನು ಮರಳಿ ನಮಗೆ ಒಪ್ಪಿಸಿದ ಚಾಲಕ ಎ.ಐ. ಅಮರಣವರ ಹಾಗೂ ನಿರ್ವಾಹಕ ಐ.ಎ. ಮನಿಯಾರ ಅಣ್ಣಾವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇನ್ನು ಚಾಲನಾ ಸಿಬ್ಬಂದಿಗೆ ಘಟಕದ ಪರವಾಗಿ ವಿಭಾಗದ ಭದ್ರತಾ ಅಧಿಕಾರಿ ಸಂಜೀವ್ ಕುಮಾರ್ ಸೇರಿ ಅಧಿಕಾರಿಗಳು ಮತ್ತು ನೌಕರರು ಅಭಿನಂದನೆ ಸಲ್ಲಿಸಿದರೆ, ಇತ್ತ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.