ಬೆಂಗಳೂರು: “ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಬಂದಾಗಲೆಲ್ಲ ಗಡಿ ಮತ್ತು ನೀರಿನ ಸಮಸ್ಯೆಗಳನ್ನು ರಾಜಕೀಯ ಕುತಂತ್ರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಬೆಳಗಾವಿ ಗಡಿ ವಿವಾದದ ಬಗ್ಗೆ ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ್ದು ಕೇವಲ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದ್ದರೆ, ಇಕ್ಕೆಲಗಳ ರಾಜ್ಯಗಳದ್ದು ಪ್ರಚೋದನಾತ್ಮಕ ಹಾಗೂ ಆಕ್ರಮಣಕಾರಿ ಪ್ರತಿಕ್ರಿಯೆಯಾಗಿದೆ.
ಈಗಿನ ಸಿಎಂ ಬಸವರಾಜ ಬೊಮ್ಮಾಯಿಯವರಂತೂ ಸಮಸ್ಯೆಯನ್ನು ಜೀವಂತವಾಗಿಡಲು ಹಪಹಪಿಸುತ್ತಿದ್ದು, ಬಿಜೆಪಿಯ ಹಾಗೂ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ವಿವಾದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
“ಮಹಾಜನ್ ವರದಿ ಜಾರಿಗೆ ಸಂಬಂಧಿಸಿ ತಮ್ಮ ಇದುವರೆಗಿನ ಹೇಳಿಕೆಗಳಿಗೆ ಸಿಎಂ ಬೊಮ್ಮಾಯಿ ಬದ್ಧರಾಗಿರಬೇಕು. ಗಡಿ ವಿಚಾರ ಬಗೆಹರಿಸಲು ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿದ್ದ ಸಲಹಾ ಸಮಿತಿಗೆ ನ್ಯಾ. ಮಂಜುನಾಥ್ ಅವರ ಮರಣಾ ನಂತರ ಎಂಟು ತಿಂಗಳ ಕಾಲ ಆ ಸ್ಥಾನವನ್ನು ಖಾಲಿ ಇಡಲಾಗಿತ್ತು ಅಸಮಾಧಾನ ಹೊರಹಾಕಿದರು.
ಇನ್ನು ಗಡಿ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ಎಷ್ಟು ತಾತ್ಸಾರವಿದೆ ಎನ್ನುವುದಕ್ಕೆ ಇದು ಸಾಕ್ಷಿ. ರಾಜಕೀಯ ಒತ್ತಡಕ್ಕೆ ಮಣಿದು ಇತ್ತೀಚೆಗೆ ನ್ಯಾ. ಶಿವರಾಜ್ ಪಾಟೀಲ್ ಅವರನ್ನು ನೇಮಕ ಮಾಡಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
“2018ರಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿಯ ಅಮಿತ್ ಶಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದರು. ಈ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿಯ ನಾಲ್ಕು ಇಂಜಿನ್ ಸರ್ಕಾರವಿದ್ದರೂ ವಿವಾದ ಬಗೆಹರಿಸುವ ಬದಲು ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ದೊಡ್ಡದು ಮಾಡಲಾಗುತ್ತಿದೆ.
ಬೊಮ್ಮಾಯಿಯವರು ಧಮ್ಮು, ತಾಕತ್ತು ಇದ್ದರೆ ನಾಲ್ಕು ಇಂಜಿನ್‌ಗಳನ್ನು ಬಳಸಿಕೊಂಡು ಗಡಿ, ಜಲ ಸಮಸ್ಯೆಗಳನ್ನು ಬಗೆಹರಿಸಲಿ” ಎಂದು ಮುಖ್ಯಮಂತ್ರಿ ಚಂದ್ರು ಸವಾಲು ಹಾಕಿದರು.