ಎಂಸಿಡಿ ಫಲಿತಾಂಶವೇ ಬಿಬಿಎಂಪಿ ಚುನಾವಣೆಯಲ್ಲಿ ಪುನರಾವರ್ತನೆ: ಮೋಹನ್ ದಾಸರಿ ಭವಿಷ್ಯ
ಬೆಂಗಳೂರು: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಗೆಲುವನ್ನು ಬೆಂಗಳೂರಿನ ಎಎಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಸಿಹಿ ಹಂಚಿ, ನಂತರ ಅಲ್ಲಿಂದ ಬಿಬಿಎಂಪಿ ಕಚೇರಿಗೆ ಬೈಕ್ ರ‍್ಯಾಲಿ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಸಾಧನೆಗಳನ್ನು ಕಣ್ಣಾರೆ ಕಂಡಿದ್ದರಿಂದ ದೆಹಲಿಯ ಜನತೆ ಎಂಸಿಡಿ ಚುನಾವಣೆಯಲ್ಲಿ ಸಹಜವಾಗಿಯೇ ಎಎಪಿಯನ್ನು ಗೆಲ್ಲಿಸಿದ್ದಾರೆ. ನಗರ ಪ್ರದೇಶದ ಜನರು ಆಮ್ ಆದ್ಮಿ ಪಾರ್ಟಿಯತ್ತ ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ಎಂಸಿಡಿ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದು ಖುಷಿಪಟ್ಟರು.
ಇನ್ನು ಬಿಬಿಎಂಪಿ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ. ಬಹುಮತದೊಂದಿಗೆ ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿಯ ಅಧಿಕಾರದ ಗದ್ದುಗೆ ಏರಲಿದೆ. ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ಮಾಡಿಸಿದ ಬಿಜೆಪಿ ನಾಯಕರಿಗೂ ಈ ವಿಚಾರ ಅರಿವಿಗೆ ಬಂದಿದೆ. ಆದ್ದರಿಂದಲೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಎಂಸಿಡಿಯಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಯು ಕಳಪೆ ಕಾಮಗಾರಿಗಳ ಮೂಲಕ ದೆಹಲಿಗೆ ಕೆಟ್ಟ ಹೆಸರು ತಂದಿತ್ತು. ಅಧಿಕಾರದ ಮದದಲ್ಲಿದ್ದ ಬಿಜೆಪಿಯು ಜನರ ಭಾವನೆಗೆ ಸ್ಪಂದಿಸುವುದನ್ನೇ ಮರೆತಿತ್ತು. ಬೆಂಗಳೂರಿನಲ್ಲಿ ಕೂಡ ಬಿಜೆಪಿ ಅದೇ ತಪ್ಪುಗಳನ್ನು ಅಲ್ಲಿಗಿಂತ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ.
ಹೀಗಾಗಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಬೆಂಗಳೂರಿನ ಪ್ರಜ್ಞಾವಂತ ಜನರು ಪಣತೊಟ್ಟಿದ್ದು, ಚುನಾವಣೆಗಾಗಿ ಕಾಯುತ್ತಿದ್ದಾರೆ. ಎಷ್ಟೇ ಕುತಂತ್ರಗಳನ್ನು ಮಾಡಿ ಚುನಾವಣೆಯನ್ನು ಮುಂದೂಡಿದರೂ, ಒಂದಲ್ಲಾ ಒಂದುದಿನ ಚುನಾವಣೆ ನಡೆಯಲೇ ಬೇಕು. ಯಾವಾಗ ಚುನಾವಣೆ ನಡೆದರೂ ಎಎಪಿಯೇ ಜಯಗಳಿಸಲಿದೆ ಎಂದು ಮೋಹನ್ ದಾಸರಿ ಭವಿಷ್ಯ ನುಡಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್ ವಿ. ಸದಂ, ಗುರುಮೂರ್ತಿ, ಉಷಾ ಮೋಹನ್, ಅಶೋಕ್ ಮೃತ್ಯುಂಜಯ, ಶಾಶವಲ್ಲಿ, ಲೋಹಿತ್, ಪಿ.ಎಸ್.ಗಿರೀಶ್, ಗಿರೀಶ್ ಪಿಳ್ಳೇಗೌಡ ಮತ್ತಿತರ ಮುಖಂಡರು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.