ಎಎಪಿ ಮಾದರಿಯಲ್ಲಿ ಕ್ರಮ ಕೈಗೊಳ್ಳುವ ಧಮ್, ತಾಕತ್ ಬೊಮ್ಮಾಯಿ ಸರ್ಕಾರಕ್ಕಿಲ್ಲ: ಬ್ರಿಜೇಶ್ ಕಾಳಪ್ಪ
ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರ ಹಾಗೂ ಶಾಸಕರುಗಳ 40% ಕಮಿಷನ್ ದಂಧೆಯನ್ನು ಬಯಲು ಮಾಡುತ್ತಿದ್ದರೂ ಯಾವುದೇ ತನಿಖೆ ನಡೆಸದೇ ಸರ್ಕಾರ ಸುಮ್ಮನಿದೆ. ಆಮ್ ಆದ್ಮಿ ಪಾರ್ಟಿ ಸರ್ಕಾರಗಳ ಮಾದರಿಯಲ್ಲಿ ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳುವ ಧಮ್, ತಾಕತ್ ಸಿಎಂ ಬಸವರಾಜ ಬೊಮ್ಮಾಯಿಯವರಿಗಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಟೀಕಿಸಿದರು.
ಪಕ್ಷ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರು ಸುದ್ದಿಗೋಷ್ಠಿ ನಡೆಸಿ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದಾರೆ.
ಗುತ್ತಿಗೆದಾರ ಮಂಜುನಾಥ್ ಅವರಿಂದ ತಿಪ್ಪಾರೆಡ್ಡಿಯರವರು 90 ಲಕ್ಷ ರೂಪಾಯಿ ಮೊತ್ತದ ಕಮಿಷನ್ ಪಡೆದಿರುವುದನ್ನು ಬಹಿರಂಗ ಮಾಡಿದ್ದಾರೆ. 40% ಭ್ರಷ್ಟಾಚಾರದ ವಿರುದ್ಧ ಕೆಂಪಣ್ಣ ನಿರಂತರವಾಗಿ ಹೋರಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೂ ದೂರು ನೀಡಿದ್ದರು.
ಆದರೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಣ್ಣ ತನಿಖೆಯನ್ನೂ ನಡೆಸಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದು ಲೇವಡಿ ಮಾಡುತ್ತಿದ್ದ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?” ಎಂದು ಪ್ರಶ್ನಿಸಿದರು.
“ಪಂಜಾಬ್ನ ಎಎಪಿ ಸರ್ಕಾರದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ವಿರುದ್ಧ 1% ಕಮಿಷನ್ ಪಡೆದ ಆರೋಪ ಕೇಳಿಬಂದಿತ್ತು. ಎಎಪಿ ಸರ್ಕಾರವು ತಕ್ಷಣವೇ ಅವರನ್ನು ವಜಾ ಮಾಡಿ ತನಿಖೆಗೆ ಆದೇಶಿಸಿತು. ಪೊಲೀಸರು ಅವರನ್ನು ಕೂಡಲೇ ಬಂಧಿಸಿದರು. ಆದರೆ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರ ವಿರುದ್ಧ ನಿರಂತವಾಗಿ ಆರೋಪ ಕೇಳಿಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಚುನಾವಣೆ ಹೊತ್ತಿನಲ್ಲಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಎಪಿ ಸರ್ಕಾರದ ಯೋಜನೆಗಳನ್ನು ಕಾಪಿ ಮಾಡುತ್ತಿರುವ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ವಿರೋಧಿ ನಿಲುವನ್ನು ಏಕೆ ಕಾಪಿ ಮಾಡುತ್ತಿಲ್ಲ? ಕೆಂಪಣ್ಣನವರ ಆರೋಪಕ್ಕೆ ಸಾಕ್ಷಿ ಕೇಳುವ ಮೂಲಕ ಬಿಜೆಪಿ ನಾಯಕರು ಅಕ್ರಮವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹಗಲಿನ ಬದಲು ರಾತ್ರಿ ನಡೆಯುವ ಇಂತಹ ಅಕ್ರಮಗಳಿಗೆ ಸಾಕ್ಷಿ ಹೇಗಿರಲು ಸಾಧ್ಯ? ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.
“ಆಮ್ ಆದ್ಮಿ ಪಾರ್ಟಿ ಮಾದರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಭಾರೀ ಪ್ರಮಾಣ ಹಣ ಉಳಿತಾಯವಾಗಲಿದೆ. ಇದರಿಂದ ಉಚಿತ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ. ದೆಹಲಿ ಹಾಗೂ ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಇದನ್ನು ಸಾಧಿಸಿ ತೋರಿಸಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ಭ್ರಷ್ಟ ಪಕ್ಷಗಳು ಉಚಿತ ಯೋಜನೆಗಳ ಭರವಸೆ ನೀಡಬಹುದೇ ಹೊರತು ಜಾರಿಗೆ ತರಲು ಅವುಗಳಿಂದ ಸಾಧ್ಯವಿಲ್ಲ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್ ವಿ ಸದಂ ಹಾಗೂ ರುದ್ರಯ್ಯ ನವಲಿ ಹಿರೇಮಠ್ ಭಾಗವಹಿಸಿದ್ದರು.