ಬೆಂಗಳೂರು: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರಿಗೆ ಕಿರುಕುಳ ನೀಡಿದ ಘಟನೆ ಹಾಗೂ ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಮಹಿಳಾ ಘಟಕವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ಶನಿವಾರ ಬೆಳಗ್ಗೆ ನಡೆದ ಪ್ರತಿಭಟನೆ ಮಧ್ಯೆ ಮಾಧ್ಯಮಗಳ ಜತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ದೆಹಲಿಯ ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣ ಹೊಂದಿರುವ ಕೇಂದ್ರ ಸರ್ಕಾರವು ಅಲ್ಲಿನ ಮಹಿಳೆಯರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ದೇಶದ ರಾಜಧಾನಿಯಲ್ಲೇ ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ಇದು ಕೇವಲ ಸ್ವಾತಿ ಮಾಲೀವಾಲ್ ಮೇಲೆ ನಡೆದ ದಾಳಿ ಎಂದು ಪರಿಗಣಿಸುವುದಕ್ಕಿಂತ ದೇಶದ ಮಹಿಳಾ ಸಮುದಾಯದ ಮೇಲೆ ನಡೆದ ದಾಳಿ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಸ್ವಾತಿ ಮಾಲೀವಾಲ್‌ರವರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆಯು ಎಚ್ಚರಿಕೆ ಗಂಟೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವುದು, ಹಲ್ಲೆ ಮಾಡುವುದು, ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಪ್ರಕರಣಗಳು ಹೆಚ್ಚುತ್ತಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವುಗಳಿಗೆ ಕೋಮುದ್ವೇಷ ಹರಡುವುದು, ಸುಳ್ಳು ಹೇಳಿ ಜನರನ್ನು ವಂಚಿಸುವುದು, ಕಮಿಷನ್ ಹೊಡೆಯುವುದು ಮುಂತಾದವುಗಳೇ ಮುಖ್ಯ ಎಂದು ಕುಶಲಸ್ವಾಮಿ ಕಿಡಿಕಾರಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ವಕ್ತಾರೆ ಉಷಾ ಮೋಹನ್ ಮಾತನಾಡಿ, ದೆಹಲಿಯ ಪೊಲೀಸ್ ಇಲಾಖೆಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುವುದರಿಂದ ಅಲ್ಲಿ ಸುರಕ್ಷತೆಯನ್ನು ಬಿಗಿ ಮಾಡಲು ಕೇಜ್ರಿವಾಲ್ ಸರ್ಕಾರಕ್ಕೆ ಅವಕಾಶವಿಲ್ಲ.
ಒಂದು ವೇಳೆ ಅದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದ್ದರೆ, ಶಿಕ್ಷಣ, ಸಾರಿಗೆ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರದಂತೆ ಪೊಲೀಸ್ ಇಲಾಖೆಯಲ್ಲೂ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿದ್ದವು. ಇತರೆ ಪಕ್ಷಗಳಲ್ಲಿ ರೌಡಿಗಳು ಹಾಗೂ ಇನ್ನಿತರ ಅಪರಾಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಿಗಳು ಆಗಿರುವುದರಿಂದ, ಅವುಗಳಿಂದ ಸುರಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಪಲ್ಲವಿ ಚಿದಂಬರಂ, ಮರಿಯಾ, ಸುಹಾಸಿನಿ ಫಣಿರಾಜ್ ಮತ್ತಿತರರು ಭಾಗವಹಿಸಿದ್ದರು.