ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯ ಮತ್ತು ಜಿಲ್ಲೆಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲೀಪ್ ಪಾಂಡೆಯವರ ಉಪಸ್ಥಿತಿಯಲ್ಲಿ ನಡೆಯಿತು.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ದಿಲೀಪ್ ಪಾಂಡೆ, “ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿಯ 40% ಆಡಳಿತವನ್ನು ಅಂತ್ಯಗೊಳಿಸಿ, ಆಮ್ ಆದ್ಮಿ ಪಾರ್ಟಿಯ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತವನ್ನು ತರುವ ನಿಟ್ಟಿನಲ್ಲಿ ಈ ಪದಗ್ರಹಣ ಸಮಾರಂಭವು ಮಹತ್ವ ಹೆಜ್ಜೆಯಾಗಿದೆ. ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪುನಾರಚನೆ ವೇಳೆ ಕ್ರಿಯಾಶೀಲ ವ್ಯಕ್ತಿಗಳನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪಕ್ಷವನ್ನು ರಾಜ್ಯದ ಮೂಲೆಮೂಲೆಯಲ್ಲಿ ಬಲಪಡಿಸುವತ್ತ ಈ ನೂತನ ತಂಡ ಕಾರ್ಯೋನ್ಮುಖವಾಗಲಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯಿಂದ ಕಣಕ್ಕಿಳಿಯಲು ಎಲ್ಲ 224 ಕ್ಷೇತ್ರಗಳಲ್ಲೂ ಸಾಮಾಜಿಕ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಅನೇಕ ನಾಯಕರು ಆಸಕ್ತಿ ತೋರುತ್ತಿದ್ದಾರೆ.
ಎಲ್ಲ ಆಕಾಂಕ್ಷಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಸಾಂಪ್ರದಾಯಿಕ ಪಕ್ಷಗಳಿಂದ ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆಯವರು, ಸುಳ್ಳು ಹೇಳುವವರು ಸ್ಪರ್ಧಿಸಿದರೆ, ಆಮ್ ಆದ್ಮಿ ಪಾರ್ಟಿಯಿಂದ ಪ್ರಾಮಾಣಿಕ ವ್ಯಕ್ತಿಗಳು ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಎಂದು ದಿಲೀಪ್ ಪಾಂಡೆ ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕರ್ನಾಟಕವನ್ನು ಆಳಿದೆ. ಈ ಯಾವ ಪಕ್ಷಗಳ ಸರ್ಕಾರಗಳೂ ಇಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಸುಧಾರಣೆ ತರುವ ಪ್ರಯತ್ನವನ್ನೇ ಮಾಡಿಲ್ಲ. ಏಕೆಂದರೆ, ಕೇವಲ ದುಡ್ಡು ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬರುವ ಈ ಪಕ್ಷಗಳಿಗೆ ಶಿಕ್ಷಣ ಹಾಗೂ ಆರೋಗ್ಯದ ಮಹತ್ವವೇ ಗೊತ್ತಿಲ್ಲ.
ಆದರೆ, ಇದೇ ಅವಧಿಯಲ್ಲಿ ದೆಹಲಿಯನ್ನಾಳಿದ ಆಮ್ ಆದ್ಮಿ ಪಾರ್ಟಿಯು ವಿಶ್ವದರ್ಜೆಯ ಸೌಲಭ್ಯಗಳನ್ನು ಶಿಕ್ಷಣ ಹಾಗೂ ಆರೋಗ್ಯ ವಲಯದಲ್ಲಿ ಅಳವಡಿಸಿಕೊಂಡಿದೆ. ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಜನತೆ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್, ರಾಜ್ಯ ಸಹ ಪ್ರಭಾರಿ ದಾಮೋದರನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸವ್ಹಾನಿ, ರಾಜ್ಯ ಮಾಧ್ಯಮ ಮತ್ತು ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಕಾರ್ಯಾಧ್ಯಕ್ಷರುಗಳಾದ ಬಿ.ಟಿ.ನಾಗಣ್ಣ, ಮೋಹನ್ ದಾಸರಿ, ರವಿಚಂದ್ರ ನೆರಬೆಂಚಿ, ಶಿವರಾಯಪ್ಪ ಜೋಗಿನ್, ಜಾಫರ್ ಮೊಯಿನುದ್ದೀನ್ ಹಾಗೂ ಎಎಪಿಯ ಎಲ್ಲ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.