ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಾಜರಾಜೇಶ್ವರಿ ನಗರದ ಘಟಕ -21ರಲ್ಲಿ ಶುಕ್ರವಾರ ಬೆಳಗ್ಗೆ ಡ್ಯೂಟಿ ಕೊಡದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ ಜೆ.ರಂಗನಾಥ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಇನ್ನು ಅವರನ್ನು ಐಸಿಯುನಲ್ಲೇ ಇರಿಸಿ ಚಿಕಿತ್ಸೆ ಮುಂದುವರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆದರೆ ಇನ್ನು 24 ಗಂಟೆಗಳ ಕಾಲ ಅವರ ಮೇಲೆ ನಿಗಾ ಇಡಲಾಗಿದ್ದು ಹೀಗಾಗಿ ಯಾರು ಕೂಡ ಅವರನ್ನು ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಕಿರುಕುಳದಿಂದ ನಾನು ನೊಂದು ಈ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್ ಕೂಡ ಬರೆದಿದ್ದರು, ಅದರಲ್ಲಿ ಪ್ರಮುಖವಾಗಿ ಸಂಚಾರಿ ನಿಯಂತ್ರಕಿ (ಟಿಐ) ಶೋಭಾ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಇವರೇ ನನ್ನ ಸಾವಿಗೆ ಕಾರಣ ಎಂದು ಹೇಳಿದ್ದರು.
ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದ್ದು, ಟಿಐ ಒಬ್ಬರೇ ಕಾರಣವಲ್ಲ ಎನ್ನುತ್ತಿದ್ದಾರೆ ನೌಕರರು. ಹೌದು! ಘಟಕದಲ್ಲಿ ಟಿಐಗಿಂತ ಮೇಲಿನ ಅಧಿಕಾರಿಗಳು ಎಂದರೆ ಡಿಎಂ, ಎಟಿಎಸ್ ಅವರು ಇದ್ದು ಟಿಐ ಎಸಗುತ್ತಿರುವ ಅನ್ಯಾಯದ ಬಗ್ಗೆ ಇವರ ಗಮನಕ್ಕೂ ತರಬಹುದಿತ್ತು ಎಂದು ಕೆಲ ನೌಕರರು ಹೇಳಿದ್ದರೆ, ಇಲ್ಲಿ ಈ ಅಧಿಕಾರಿಗಳ ಅಪ್ಪಣೆ ಇಲ್ಲದೆ ಟಿಐ ಶೋಭಾ ಅವರು ಈ ರೀತಿ ಒಬ್ಬ ನೌಕರನನ್ನು ನಡೆಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅಂದರೆ ಈ ಕಿರುಕುಳ ಕೊಡುವುದರಲ್ಲಿ ಡಿಎಂ ಪಾತ್ರವು ಬಹಳ ಇದೆ ಎಂಬ ಆರೋಪವನ್ನು ಮಾಡಿದ್ದಾರೆ.
ಇನ್ನು ಘಟಕ ವ್ಯವಸ್ಥಾಪಕರು ಬೆಳಗ್ಗೆ ಬಂದ ಕೂಡಲೇ ನೌಕರರ ಹಾಜರಿ ಪುಸ್ತಕವನ್ನು ಮುಂದೆ ಇಟ್ಟುಕೊಂಡು ಎಟಿಎಸ್, ಟಿಐ ಮತ್ತು ಟಿಸಿಗಳನ್ನು ಕರೆದು ಈ ದಿನ ಇವರಿಗೆ ಡ್ಯೂಟಿ ಕೊಡಬೇಡಿ, ಅವರನ್ನು ಡಿಪೋದಲ್ಲೇ ಕೂರಿಸಿ ಬಳಿಕ ಮನೆಗೆ ಕಳುಹಿಸಿ ಗೈರುಹಾಜರಿ ತೋರಿಸಬೇಕು ಎಂದು ತಮ್ಮ ಈ ಅಧೀನ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡುತ್ತಾರೆ. ಬಳಿಕ ಈ ಅಧಿಕಾರಿಗಳು ಅವರು ಹೇಳಿದವರಿಗೆ ಡ್ಯೂಟಿ ಕೊಡೋದಿಲ್ಲ ಎಂಬ ಆರೋಪವನ್ನು ಘಟಕದ ನೌಕರರು ಮಾಡುತ್ತಿದ್ದಾರೆ.
ಇನ್ನು ಟಿಐ ಅವರು ಡ್ಯೂಟಿ ಕೊಡುತ್ತಿಲ್ಲ ಎಂಬುದರ ಬಗ್ಗೆ, ಇಲ್ಲವೇ ಈ ನೌಕರ ನಿತ್ಯ ಗೈರಾಗುತ್ತಿದ್ದಾನೆ ಎಂಬ ಬಗ್ಗೆ ಡಿಎಂಗೆ ಮಾಹಿತಿ ಇರುವುದಿಲ್ಲವೇ. ನೌಕರರ ಹಾಜರಿ ಪುಸ್ತಕ ತೆಗೆದುಕೊಂಡು ಕೂರುವ ಈ ಡಿಎಂ ಅವರಿಗೆ ಯಾರು ಬಂದಿದ್ದಾರೆ ಎಂಬುವುದು ತಿಳಿಯುವುದಿಲ್ಲವೇ ಎಂದು ಪ್ರಶ್ನಿಸುತ್ತಿರುವ ನೌಕರರು ಡಿಪೋನಲ್ಲಿ ನೌಕರರಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿರುವುದರ ಹಿಂದೆ ಇಲ್ಲಿನ ಮೇಲಧಿಕಾರಿಗಳ ಕೈವಾಡವೇ ಕಾರಣ ಎಂದು ದೂರುತ್ತಿದ್ದಾರೆ.
ಆದರೆ ಈ ಬಗ್ಗೆ ಏನು ತಿಳಿಯದ ಅಮಾಯಕ ನೌಕರರು ತಮಗೆ ಡ್ಯೂಟಿ ಕೊಡದವರನ್ನು ನೇರವಾಗಿ ಹೊಣೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೇ ನೌಕರರಿಂದ ಕೇಳಿ ಬರುತ್ತಿದೆ. ಹೀಗಾಗಿ ಈ ಬಗ್ಗೆ ಸಂಸ್ಥೆಯ ಮೇಲಧಿಕಾರಿಗಳು ಜತೆಗೆ ಸಾರಿಗೆ ಸಚಿವರು ಗಮನಹರಿಸಿ ಸಮಸ್ಯೆಗಳನ್ನು ಬಗಹರಿಸಬೇಕು ಮತ್ತು ಕಿರುಕುಳ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.