ಹಾಸನ: ಬಸ್‌ನಲ್ಲಿ ಮೊಬೈಲ್ ಫೋನ್ ಕಳೆದುಕೊಂಡ ಪ್ರಯಾಣಿಕರೊಬ್ಬರಿಗೆ ಅದನ್ನು ಮರಳಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗದ ಅರಕಲಗೂಡು ಘಟಕದ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಅರಕಲಗೂಡು ಘಟಕದ ನಿರ್ವಾಹಕ ರಂಗಸ್ವಾಮಿ ಎಂಬುವರೆ ಬಸ್‌ನಲ್ಲಿ ಸಿಕ್ಕಿದ ಸುಮಾರು 25 ಸಾವಿರ ರೂ.ಮೌಲ್ಯದ ಮೊಬೈಲ್‌ಫೋನ್‌ಅನ್ನು ಕಳೆದುಕೊಂಡ ಪ್ರಯಾಣಿಕನಿಗೆ ಮರಳಿಸುವ ಮೂಲಕ ಸಾರಿಗೆ ಸಂಸ್ಥೆಯ ಗೌರವವನ್ನು ಹೆಚ್ಚಿಸಿದವರು.
ಅರಕಲಗೂಡಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ತಮಿಳುನಾಡು ಮೂಲದ ಸೆಲ್ವಂ ಎಂಬುವರು ಬೆಂಗಳೂರಿಗೆ ಬಂದು ಬಸ್ ಇಳಿದು ಹೋಗಿದ್ದಾರೆ. ಈ ವೇಳೆ ಜೇಬ್‌ನಲ್ಲಿ ಇದ್ದ ಮೊಬೈಲ್ ಜಾರಿ ಸಿಟ್‌ಮೇಲೆ ಬಿದ್ದುಹೋಗಿದೆ. ಬಳಿಕ ನಿರ್ವಾಹಕ ರಂಗಸ್ವಾಮಿ ಅವರು ಸೀಟ್‌ನಲ್ಲಿ ಬಿದ್ದಿದ್ದ ಫೋನ್ ಗಮನಿಸಿ ಅದನ್ನು ತೆಗೆದುಕೊಂಡಿದ್ದಾರೆ.
ಫೋನ್ ಕಳೆದುಕೊಂಡ ವ್ಯಕ್ತಿ ಬಸ್ ಇಳಿದು ಹೋದ ಮೇಲೆ ಮೊಬೈಲ್‌ಫೋನ್‌ಗೆ ಕರೆ ಮಾಡಿದ್ದಾರೆ. ಆ ವೇಳೆ ರಂಗಸ್ವಾಮಿಯವರು ಗಾಬರಿ ಬೀಳಬೇಡಿ ಇಲ್ಲೇ ಇದೆ ಬನ್ನಿ ಎಂದು ಕರೆದು ಫೋನನ್ನು ಪ್ರಾಮಾಣಿಕತೆಯಿಂದ ಸೆಲ್ವಂ ಅವರಿಗೆ ಕೊಟ್ಟಿದ್ದಾರೆ.
ಈ ಮೂಲಕ ಸಾರಿಗೆ ಸಂಸ್ಥೆಯ ನೌಕರರು ಮತ್ತೊಮ್ಮೆ ಪ್ರಾಮಾಣಿಕತೆ ಮೆರೆದು ಸಾರಿಗೆ ಸಂಸ್ಥೆಗೆ ಗೌರವ ಹೆಚ್ಚಿಸುವ ಜತೆಗೆ ನೌಕರರ ಬಗ್ಗೆ ಒಳ್ಳೆಯ ಭಾವನ ಮೂಡುವಂತೆ ಮಾಡಿದ್ದಾರೆ.
ಇನ್ನು ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ಅದನ್ನು ನಿರ್ವಾಹಕ ರಂಗಸ್ವಾಮಿ ಅವರಿಂದ ಪಡೆದು ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಸ್ಥೆಯ ಅಧಿಕಾರಿಗಳು ಕೂಡ ರಂಗಸ್ವಾಮಿ ಅವರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ.