CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಗೃಹ ನಿರ್ಮಾಣ ಸಂಘದಲ್ಲಿ 15 ಕೋಟಿ ರೂ. ಗುಳುಂ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೂರಾರು ಕನಸ್ಸಿನೊಂದಿಗೆ ಬೆಂಗಳೂರಿನಲ್ಲೊಂದು ಮನೆ ಮಾಡಿಕೊಳ್ಳಬೇಕು ಎಂದು ಪೈಸೆ ಪೈಸೆಯನ್ನು ಕೂಡಿಟ್ಟು ನಿವೇಶನ ಖರೀದಿಸಲು ಹಣ ಹೂಡಿದರೆ, ನಂಬಿಕಸ್ತರಿಂದಲೇ ಆ ಹಣ ದುರುಪಯೋಗವಾಗುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅಂತ ಕೃತ್ಯವನ್ನು ಎಸಗಿ ತಮ್ಮ ಸಹೋದ್ಯೋಗಿಗಳ ಸುಮಾರು 15 ಕೋಟಿ ರೂ.ಗಳನ್ನು ನುಂಗಿ ನೀರು ಕುಡಿದಿದ್ದಾರೆ.

ಈ ಸಂಬಂಧ ವಂಚಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ದುರಾದೃಷ್ಟವೆಂದರೆ ಆ ಪಾಪಿಗಳಿಗೆ ಇನ್ನೂ ಶಿಕ್ಷೆಯಾಗದೆ ರಾಜರೋಷವಾಗಿ ತಾವು ತಪ್ಪೇ ಮಾಡಿಲ್ಲ ಎಂಬಂತೆ ಸಾರಿಗೆ ನಿಗಮಗಳಲ್ಲಿ ಇದ್ದಾರೆ. ಇದು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ಅಸಾಯಕತೆಯೋ ಏನೋ ಗೊತ್ತಿಲ್ಲ. ಆದರೆ, ಪಾಪಿ ಚಿರಾಯು ಎಂಬಂತೆ ನೌಕರರು ಕಟ್ಟಿಕೊಂಡಿದ್ದ ಕನಸ್ಸನ್ನು ನುಚ್ಚುನೂರು ಮಾಡಿ ಅದರ ಮೇಲೆ ಸೌಧಕಟ್ಟಿಕೊಂಡು ಮೆರೆಯುತ್ತಿದ್ದಾರೆ ಪಾಪಿಗಳು.

ಹೌದು! ಇದು ನಡೆದಿರುವುದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಂಘದಲ್ಲಿ. ನಿಗಮದ ಅಧಿಕಾರಿಗಳು ಮತ್ತು ನೌಕರರು ನಿವೇಶನಕ್ಕಾಗಿ ಲಕ್ಷ ಲಕ್ಷ ರೂಪಾಯಿಯನ್ನು ತಂದು ಕಟ್ಟಿದ್ದಾರೆ. ಆದರೆ ಅವರಿಗೆ ನಿವೇಶನ ಹಂಚಿಕೆ ಮಾಡದೆ ಕೋಟಿ ಕೋಟಿ ರೂ.ಗಳನ್ನು ನುಂಗಿ ನೀರು ಕುಡಿದಿದ್ದಾರೆ ಆರೋಪಿಗಳಾದ ಮಂಡ್ಯ ವಿಭಾಗದ ಕೆಎಸ್‌ಆರ್‌ಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎ.ಮಂಜುನಾಥ, ರಾಮನಗರ ವಿಭಾಗದ ವಿಭಾಗೀಯ ಸಂಚಲನಾಧಿಕಾರಿ ಪುರುಷೋತ್ತಮ, ಬಿಎಂಟಿಸಿ ಕೇಂದ್ರ ಕಚೇರಿಯ ಲೆಕ್ಕಾಧಿಕಾರಿ ಟಿ.ಎಲ್.ಅರುಣಕುಮಾರ್, ಕೆಎಸ್‌ಆರ್‌ಟಿಸಿ ಬೆಂ.ಕೇ.ವಿಭಾಗದ ಘಟಕ-4ರ ಚಾಲಕ ಎಸ್.ಎನ್‌.ರಾಜಣ್ಣ ಸೇರಿದಂತೆ 15 ಹೆಚ್ಚು ಮಂದಿ.

ಮೋಸಗಾರರ ಬಣ್ಣ ಬಯಲಾಗಿದೆ: ಕ.ರಾ.ರ.ಸಾ.ನಿಗಮದ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ನಿಗಮದ ಅಧಿಕಾರಿ ಹಾಗೂ ನೌಕರರಿಗೆ ನಿವೇಶನ ಹಂಚಿಕೆ ವಿಷಯದಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಮತ್ತು ಈ ಅವ್ಯವಹಾರದಲ್ಲಿ ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗಿಯಾಗಿರುವ ಕುರಿತು ಟಿ.ಹನುಮಂತಪ್ಪ ಎಂಬುವರು ವಿಲ್ಸನ್ ಗಾರ್ಡನ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಈ ಸಂಬಂಧ ಸಾರಿಗೆ ನಿಗಮಗಳಲ್ಲೂ ತನಿಖೆ ನಡೆಸಿದ್ದು, ಈ ಕುರಿತು ಭದ್ರತಾ ಮತ್ತು ಜಾಗೃತಾಧಿಕಾರಿ ಕೆ.ಎನ್.ಲಕ್ಷ್ಮಣ್ ಅವರು ಸಲ್ಲಿಸಲ್ಪಟ್ಟ ವರದಿಯಲ್ಲಿ, ಆರೋಪಿಗಳು 2007-08ನೇ ಸಾಲಿನಿಂದ ಇಲ್ಲಿಯವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಗಳಾಗಿದ್ದು, ಅವರು ನಿಗಮಗಳ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನೆಲಮಂಗಲದ ಕರೇಗೌಡನಪಾಳ್ಯದ ಬಳಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡುವುದಾಗಿ ತಿಳಿಸಿ ಸಂಘದ ಸುಮಾರು 900 ಸದಸ್ಯರುಗಳಿಂದ ಹಣ ಸಂಗ್ರಹಿಸಿದ್ದಾರೆ.

ಆ ಸದಸ್ಯರಿಗೆ ಸುಮಾರು 12 ವರ್ಷವಾದರೂ ಯಾವುದೇ ನಿವೇಶನ ಹಂಚಿಕೆ ಮಾಡದೇ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಹಕಾರ ಇಲಾಖೆಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಸಂಘದ ಹಾಗೂ ಸಂಸ್ಥೆಯ ಮುಖಾಂತರ ಸಂಸ್ಥೆಯ ಅಧಿಕಾರಿ/ನೌಕರರ ಏಳಗೆಗೆ/ಸದುದ್ದೇಶಿತ ಕಾರ್ಯಗಳಿಗೆ ಸಹಾಯ/ ಸಹಕಾರಿಯಾಗುವಂತಹ ಕರ್ತವ್ಯಗಳನ್ನು ನಿರ್ವಹಿಸದೇ ಸಂಘದ ಸದಸ್ಯರಿಂದ ನಿವೇಶನಕ್ಕಾಗಿ ಸಂಗ್ರಹಿಸಿದ ಹಣವನ್ನು ವಂಚಿಸಿರುವುದರಿಂದ ವಂಚನೆ ಪ್ರಕರಣ ದಾಖಲಾಗಿದೆ.

ಇನ್ನು ಮೋಸ ಮಾಡುವ ಉದ್ದೇಶದಿಂದಲೇ ನಿರ್ದೇಶಕರನ್ನೇ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿಕೊಂಡು ಅವರಿಗೆ ಬ್ಯಾಂಕ್ ವ್ಯವಹಾರಗಳ ಅಧಿಕಾರ ನೀಡಿ ಚೆಕ್ಕುಗಳಗೆ ಸಹಿ ಹಾಕಿ ಅಭಿವೃದ್ಧಿದಾರರಿಗೆ ಹಣ ಪಾವತಿಸಿರುವುದು ಕಂಡು ಬಂದಿದೆ. ಈ ಮೂಲಕ ಸಹಕಾರಿ ಸಂಘ ಸಂಘದ ನಿಯಮಗಳಲ್ಲಿ ಸಂಘಕ್ಕೆ ಗೌರವ ಕಾರ್ಯದರ್ಶಿ ಅವರನ್ನು ನೇಮಿಸಿಕೊಳ್ಳಲು ಅವಕಾಶವಿಲ್ಲದಿದ್ದರೂ ಗೌರವ ಕಾರ್ಯದರ್ಶಿ ನೇಮಿಸಿಕೊಂಡಿದ್ದಾರೆ.

ಸಂಘದ ಲೆಕ್ಕಪತ್ರಗಳು 2018-19 ನೇ ಸಾಲಿನವರೆಗೂ ಆಂತರಿಕ ಲೆಕ್ಕ ಪರಿಶೋಧನೆಯಾಗಿದ್ದು, 31.03.2019 ರ ಅಂತ್ಯಕ್ಕೆ ಸಂಘವು ಸುಮಾರು ರೂ.18 ಲಕ್ಷ ರೂ. ನಷ್ಟ ಅನುಭವಿಸಿರುವುದಾಗಿ ಉಲ್ಲೇರಿಸಿದ್ದಾರೆ. ಮುಂದುವರಿದು, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್, ವಿಲ್ಸನ್‌ ಗಾರ್ಡನ್ ಪೊಲೀಸರು 19.06.2021 ರಂದು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ತನಿಖಾ ವರದಿಯ ಅಂಶಗಳನ್ನು ಅವಲೋಕಿಸಿದಾಗ ಕರ್ನಾಟಕ ರಾಜ್ಯ ರಸ್ತೆ ಸಾಧಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮಂಜೂರಾಗಿದ್ದ 72 ಎಕರೆ 27 ಗುಂಟೆ ಜಮೀನನ್ನು ನಿವೇಶನಗಳ ಅಭಿವೃದ್ಧಿಗಾಗಿ ಕರ್ನಾಟಕ ಹೌಸಿಂಗ್‌ ಬೋರ್ಡ್‌ಗೆ ನೋಂದಣಿಯಾಗಿ ಅಭಿವೃದ್ಧಿ ಕೆಲಸಕ್ಕೆ ಸಿದ್ಧವಾಗಿದೆ.

ಈ ಜಮೀನಿನ ನಿವೇಶನಗಳ ಅಭಿವೃದ್ಧಿಗೋಸ್ಕರ ಹಣ ಲಪಟಾಯಿಸುವ ದುರುದ್ದೇಶದಿಂದ ಈ ಪ್ರಕರಣದ ಆರೋಪಿಗಳಾದ ಜಿ.ಎ.ಮಂಜುನಾಥ, ಅಧ್ಯಕ್ಷರಾಗಿ, ಎ-2 ರಾಜಣ್ಣ, ಉಪಾಧ್ಯಕ್ಷರಾಗಿ ಎ-3 ಪುರುಷೋತ್ತಮ ಕಾರ್ಯದರ್ಶಿಯಾಗಿದ್ದು ಸಂಘದ ಬೈಲಾ ಪ್ರಕಾರ ಈ ಮೂವರಲ್ಲಿ ಇಬ್ಬರು ಹಣದ ವಹಿವಾಟಿಗೆ ಸಹಿ ಮಾಡುವ ಅಧಿಕಾರವಿರುತ್ತದೆ.

ಪ್ರಕರಣದಲ್ಲಿ ಉಳಿದ ಆರೋಪಿಗಳು, ನಿರ್ದೇಶಕರಾಗಿದ್ದು, ಈ ಎಲ್ಲರೂ ಸೇರಿಕೊಂಡು ಸಂಘಕ್ಕೆ ಆರ್ಥಿಕವಾಗಿ ನಷ್ಟ ಉಂಟು ಮಾಡಿ ಅಕ್ರಮ ಲಾಭ ಗಳಿಸುವ ದುರುದ್ದೇಶದಿಂದಲೇ, ‘ವ್ಯವಸ್ಥಿತ ಒಳಸಂಚು ರೂಪಿಸಿಕೊಂಡು 2011ರಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಹಾಗೂ ಮೇ. ಸುಪ್ರೀಂ ಡೆವಲಪರ್ಸ್ ಅಸೋಸಿಯೇಟ್ಸ್ ಎಲ್ಲರೂ ಸೇರಿ ತ್ರಿಪಾರ್ಟಿ ಕರಾರು ಮಾಡಕೊಂಡು 2010-12ನೇ ಸಾಲಿನಲ್ಲಿ ಆರೋಪಿಗಳೆಲ್ಲರೂ ಸೇರಿಕೊಂಡು ಜಿ.ಎ.ಮಂಜುನಾಥನ ಅಣ್ಣನಾದ ಲಕ್ಷ್ಮೀನಾರಾಯಣಗೌಡ ಆರೋಪಿಯನ್ನು ಕರ್ನಾಟಕ ಹೌಸಿಂಗ್‌ ಬೋರ್ಡ್‌ನ ಗಮನಕ್ಕೆ ತರದೆ ಅಭಿವೃದ್ಧಿದಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಆ ವೇಳೆ ತ್ರಿಪಕ್ಷೀಯ ಕರಾರಿನಂತೆ ಕೆ.ಎಚ್.ಬಿ.ಯ ಎಸ್ರೋ ಖಾತೆಯ ಮುಖಾಂತರ ಹಣವನ್ನು ಪಾವತಿಸದೆ ನೇರವಾಗಿ ಭೂ ನಿವೇಶನ ಅಭಿವೃದ್ಧಿದಾರರಾದ ಮೇ. ಸುಪ್ರೀಂ ಅಸೋಸಿಯೇಟ್ಸ್ ದಿನಾಂಕ 01.04.2010 ರಿಂದ 30.06.2012ರವರೆಗೆ ಒಟ್ಟು 12,10,00,000 ಹಣವನ್ನು ಹಾಗೂ 01.12.2012 ರಿಂದ 31.03.2015ರವರೆಗೆ ಎ-3 ಪುರುಸೊತ್ತಮ, ಎ-4 ವಿ.ಕೆ.ಪುಟ್ಟಸ್ವಾಮಿ, ಎ-5 ಶಿವಣ್ಣ ಆರೋಪಿಗಳು ಬೇರೆ ಬೇರೆ ದಿನಾಂಕಗಳಂದು 1,70,00,000 ರೂ.ಗಳನ್ನು ಹಾಗೂ 01.04.2015ರಿಂದ 14.09.2016ರವರೆಗೆ ಪುರುಷೋತ್ತಮ, ಶಿವಣ್ಣ, ಅರುಣಕುಮಾ‌ರ್‌ ಸೇರಿಕೊಂಡು 93,10,000 ರೂ.ಗಳನ್ನು ಒಟ್ಟು ರೂ.14,73,10,000 ರೂ. ಗಳನ್ನು ನೀಡಿ ಕರಾರಿನ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಈ ಸಮಯದಲ್ಲಿ ಯಾವುದೇ ನಿವೇಶನ ಅಭಿವೃದ್ಧಿ ಕೆಲಸ ಮಾಡದೆ, ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗೂ 2010 ರಿಂದ 2015ನೇ ಸಾಲಿನಲ್ಲಿ ಸಂಘಕ್ಕೆ ಸೇರಿದ 110 ಎಕರೆ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 5 ಎಕರೆ 12 ಗುಂಟೆ ರೈತರ ಜಮೀನನ್ನು ಸಂಘದ ಹಣದಿಂದ ಖರೀದಿಸಿ ಸಂಘದ ನಿಯಮಾವಳಿಯಂತೆ ಕೆ.ಎಚ್‌.ಬಿಗೆ ನೋಂದಣಿ ಮಾಡದೆ, ಅನಧಿಕೃತವಾಗಿ ಎ-15 ಸುರೇಂದ್ರ ಎಂಬ ಆರೋಪಿ ಹಾಗೂ ಅವರ ಸ್ನೇಹಿತರುಗಳಗೆ ನೋಂದಣಿ ಮಾಡಿಕೊಟ್ಟು ಸಂಘಕ್ಕೆ ಅಕ್ರಮ ನಷ್ಟ ಉಂಟು ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ 2015 ರಿಂದ 2016 ನೇ ಸಾಲಿನಲ್ಲಿ ಅಧ್ಯಕ್ಷನಾಗಿದ್ದ ಅರುಣ್‌ ಕುಮಾರ್ ಅನಧಿಕೃತವಾಗಿ ಸಂಘಕ್ಕೆ ಸೇರಿದ 54,00,000 ರೂ.ಗಳನ್ನು “ಉಷಾ ಎಂಟರ್‌ ಪ್ರೈಸರ್ಸ್ ಗೆ ಕರಾರಿನ ನಿಯಮವನ್ನು ಉಲ್ಲಂಘನೆ ಮಾಡಿ, ನೇರವಾಗಿ ಹಣ ನೀಡಿ ನಿವೇಶನಗಳ ಅಭಿವೃದ್ಧಿ ಕಾರ್ಯ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾನೆ.

ಅಲ್ಲದೆ ಸಂಘಕ್ಕೆ ಸೇರಿದ 18,00,000 ಹಣವನ್ನು ಆಡಳಿತ ಮಂಡಳಿಯ ಅನುಮೋದನೆ ಪಡೆಯದೆ, ಸ್ವಂತಕ್ಕೆ ಪಾವತಿಸಿಕೊಂಡು ಸಂಘಕ್ಕೆ ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದಾನೆ. ಸಂಘಕ್ಕೆ ಮತ್ತು ನಿವೇಶನ ಕೊಳ್ಳಲು ಹಣ ಪಾವತಿಸಿರುವ ನಿವೇಶನ ಆಕಾಂಕ್ಷಿಗಳಿಗೆ ನಂಬಿಸಿ ಮೋಸ ಮಾಡಲು ಆರೋಪಿಗಳೆಲ್ಲರೂ ವ್ಯವಸ್ಥಿತ ಒಳಸಂಚು ನಡೆಸಿ ಸಂಘಕ್ಕೆ ಸೇರಿದ 14,73,10,000 ರೂ.ಗಳನ್ನು ಹಾಗೂ ಭೂಮಿಯನ್ನು ಸಂಘದ ಬೈಲಾದ ನಿಯಮಾವಳಿಗಳು ಹಾಗೂ ತ್ರಿಪಾರ್ಟಿ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ಸಂಘ ಮತ್ತು ನಿವೇಶನ ಆಕಾಂಕ್ಷಿಗಳಲ್ಲಿ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ.

ಇವರು ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುವುದು ಅನಿಖೆ ವೇಳೆ ಸಂಗ್ರಹಿಸಿದ ಎಲ್ಲ ಸಾಕ್ಷಾಧಾರಗಳಿಂದ ದೃಢಪಟ್ಟರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ ತನಿಖಾಧಿಕಾರಿ ಲಕ್ಷ್ಮಣ್‌. ಇನ್ನು 2007ರಿಂದ ಇಲ್ಲಿಯವರೆಗೂ ಹಣ ಕಟ್ಟಿರುವ ಅಧಿಕಾರಿಗಳು ಮತ್ತು ನೌಕರರು ಇತ್ತ ಹಣವು ಸಿಗದೆ ಅತ್ತ ನಿವೇಶನವೂ ಬಾರರೆ ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಇಂಥ ಮೋಸಗಾರರಿಗೆ ನ್ಯಾಯಾಲಯ ತಕ್ಕ ಶಿಕ್ಷೆ ವಿಧಿಸುವ ಜತೆಗೆ ಮೋಸಕ್ಕೆ ಒಳಗಾಗಿರುವ ಎಲ್ಲರಿಗೂ ಬಡ್ಡಿ ಸಹಿತ ಹಣವನ್ನು ವಾಪಸ್‌ ಕೊಡಿಸಬೇಕು ಎಂದು ವಂಚನೆಗೆ ಒಳಗಾಗಿರುವ ಅಧಿಕಾರಿಗಳು ಮತ್ತು ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು