ಮೈಸೂರು: ಕಬ್ಬಿನ 150 ರೂ. ಬಾಕಿ, ಪ್ರಸಕ್ತ ಸಾಲಿನ ಕಬ್ಬುದರ ನಿಗದಿ ಮಾಡಬೇಏಕು ಹಾಗೂ ನಾಲೆಗಳಿಗೆ ಭತ್ತ ಬೆಳೆಯಲು ನೀರು ಹರಿಸುವಂತೆ ಒತ್ತಾಯಿಸಿ ಇದೇ ಆ. 14 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಕಬ್ಬುದರ ನಿಗದಿ. 150 ರೂ. ಬಾಕಿ ಹಣದ ವಿಚಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಕ್ಕರೆ ಕಾರ್ಖಾನೆ ಉಪ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಒಂದು ವಾರದ ಗಡುವು ನೀಡಿದರು ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಒತ್ತಾಯ ಪತ್ರ ಸಲ್ಲಿಸಲಾಗಿದೆ ಎಂದು ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರಿಗೆ ನ್ಯಾಯ ಸಿಕ್ಕಿಲ್ಲ. ಶೇ. 30ರಷ್ಟು ರೈತರು ಬೇಸತ್ತು ಕಬ್ಬು ಬೆಳೆಯಿಂದಲೇ ದೂರವಾಗುತ್ತಿದ್ದಾರೆ. ಪಕ್ಕದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಣ್ಣಾರಿ ಕಾರ್ಖಾನೆಗಿಂತ 100 ರೂ. ಹೆಚ್ಚು ನೀಡಿ ಕಬ್ಬು ಖರಿದಿಸುತ್ತಿವೆ. ಮಹದೇಶ್ವರ ಹಾಗೂ ಬಣ್ಣಾರಿ ಸಕ್ಕರೆ ಕಾರ್ಖಾನೆಯವರಿಗೆ ಹೆಚ್ಚುವರಿ ಹಣ ನೀಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಹಿಂದಿನ ವರ್ಷದ ಬಾಕಿ 150 ರೂ. ಪಾವತಿಸಬೇಕು. ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರು ಮನಬಂದಂತೆ ಸುಲಿಗೆ ಮಾಡಲಾಗುತ್ತಿದೆ ಈ ವರ್ಷ ನಿಗದಿ ಮಾಡಿರುವ ಕಟಾವು ಕೂಲಿ 450 ರೂ.ಗಿಂತ ಹೆಚ್ಚುವರಿ ತೆಗೆದುಕೊಳ್ಳಬಾರದು. ಕಬ್ಬಿನ ಲಾರಿ ತೂಕ ವಿಳಂಬವಾಗುತ್ತಿರುವುದರಿಂದ. ರೈತರಿಗೆ ತೂಕದಲ್ಲೂ ಮೋಸವಾಗುತ್ತಿದೆ. ಈ ಮೋಸ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಒಪ್ಪಂದ ಮಾಡಿಕೊಂಡ ರೈತರಿಗೆ ಒಪ್ಪಂದ ಪತ್ರದ ಪ್ರತಿ ನೀಡಬೇಕು. ಒಪ್ಪಂದದ ಪ್ರಕಾರ 12 ತಿಂಗಳಿಗೆ ಕಬ್ಬನ್ನು ಕಟಾವು ಮಾಡಬೇಕು. ಕಾರ್ಖಾನೆಯವರು ವಿಳಂಬ ಮಾಡಿದರೆ ವಿಳಂಬದ ಅವಧಿಗೆ ಹೆಚ್ಚುವರಿ ಹಣ ಕೊಡಬೇಕು. ಸಕ್ಕರೆ ಕಾರ್ಖಾನೆಗಳ ಲೈಸನ್ಸಸಿ೦ಗ್ ಅಧಿಕಾರಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಮುತ್ತಿಗೆ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಬೆಳೆ ವಿಮಾ ಪರಿಹಾರ ಬಂದಿಲ್ಲ ಕೂಡಲೇ ನಷ್ಟದ ಪರಿಹಾರ ಕೊಡಿಸಬೇಕು. ಕೃಷಿ ಪಂಪಸೆಟ್‌ಗಳಿಗೆ ಹಗಲು ವೇಳೆ 12 ಗಂಟೆಗಳ ವಿದ್ಯುತ್ ನೀಡಬೇಕು. ರಾಜ್ಯದ ಸಂಕಷ್ಟ ಕಾಲದಲ್ಲೂ ಸ್ಥಳೀಯ ರೈತರನ್ನು ನಿರ್ಲಕ್ಷಿಸಿ ಕಬಿನಿ ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರನ್ನು ಹರಿಸಿ ಅಚ್ಚುಕಟ್ಟು ಭಾಗದ ರೈತರನ್ನ ಬಲಿ ಕೊಡುತ್ತಿರುವುದು ಸರಿಯಲ್ಲ. ಎಲ್ಲ ನಾಲೆಗಳಿಗೆ ಬೆಳೆ ಬೆಳೆಯಲು ಕೂಡಲೇ ನೀರು ಹರಿಸಬೇಕು ಎಂದು ಹೇಳಿದರು.
ಹಿಂದಿನ ಎರಡು ಮೂರು ವರ್ಷಗಳು ನೂರಾರು ಟಿಎಂಸಿ ನೀರನ್ನು ನ್ಯಾಯಾಲಯದ ಆದೇಶಕ್ಕಿಂತಲೂ ಹೆಚ್ಚುವರಿ ಹರಿಸಲಾಗಿದೆ ಅದೇ ನೀರನ್ನ ಮೇಕೆದಾಟು ನಿರ್ಮಿಸಿ ಸಂಗ್ರಹಿಸಿ ಇಟ್ಟುಕೊಂಡಿದ್ದರೆ ತಮಿಳುನಾಡಿಗೆ ಇಂತಹ ಸಂಕಷ್ಟ ಕಾಲದಲ್ಲಿ ಬಿಡಬಹುದಾಗಿತ್ತು ಎಂದರು.
ಇನ್ನು ಪ್ರಸಕ್ತ ಸಾಲಿನಲ್ಲಿ ಶೇ. 30ರಷ್ಟು ಕಬ್ಬು ಕಡಿಮೆಯಾಗಿದೆ ಕಾರ್ಖಾನೆಗಳ ಬೇಡಿಕೆ ಹೆಚ್ಚಿದೆ ಬೇರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಹೆಚ್ಚುವರಿ ಹಣ ಕೊಟ್ಟು ಖರೀದಿಸಲು ಮುಂದಾಗುತ್ತಿದ್ದಾರೆ. ರೈತರು ಕಬ್ಬು ಕಟಾವು ಮಾಡಲು ಆತೊರೆಯಬಾರದು ತಾಳ್ಮೆಯಿಂದ ಹೋರಾಟಕ್ಕೆ ಸಹಕರಿಸಿ ನ್ಯಾಯಕ್ಕಾಗಿ ಹೋರಾಟ ನಮ್ಮ ಹಕ್ಕುಎಂಬುದನ್ನು ಸಾಬೀತು ಮಾಡಲು ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಬಂದು ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆ ಭಾಗ್ಯರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ವೆಂಕಟೇಶ, ಕಮಲಮ್ಮ, ಮಂಜುನಾಥ, ಸುನಿಲ್ ಇದ್ದರು.