ಬೆಂಗಳೂರು: ಬೈಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮಾರುತಿನಗರ ಮುಖ್ಯರಸ್ತೆಯಲ್ಲಿ ರಾತ್ರಿ ನಡೆದಿದೆ.
ಸರ್ಕಾರಿ ಪ್ರಾಧ್ಯಾಪಕ ನರಸಪ್ಪ (51) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಯುವತಿ ರಕ್ಷಾ (21) ಎಂಬುವರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಚಂದನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ 11.45ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಅಜಾಗರೂಕ ಚಾಲನೆಯೇ ಕಾರಣ ಎಂದು ಹೇಳಲಾಗುತ್ತಿದೆ. ರಕ್ಷಾ ಹಾಗೂ ಚಂದನ್ ಈ ಇಬ್ಬರು ಸ್ನೇಹಿತರು ಪಲ್ಸರ್ ಬೈಕ್ನಲ್ಲಿ ಮಾರುತಿನಗರ ಕಡೆಯಿಂದ ಕೆಎಲ್ಇ ಕಾಲೇಜು ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ನರಸಪ್ಪಗೆ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ನರಸಪ್ಪ ತೀವ್ರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ. ರಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಬೈಕ್ನಲ್ಲಿ ತೆರಳುತ್ತಿದ್ದ ಈ ಮೂವರು ಕೂಡ ಹೆಲ್ಮೆಟ್ ಹಾಕಿರಲಿಲ್ಲ. ಒಂದು ವೇಳೆ ಹೆಲ್ಮೆಟ್ ಹಾಕಿದ್ದರು ಜೀವ ಉಳಿಯುತ್ತಿತ್ತೇನೋ.
ಇನ್ನು ರಕ್ಷಾ ಕಿಡ್ ಕೇರ್ನಲ್ಲಿ ಕೆಲಸ ಮಾಡುತ್ತಿದ್ದರೆ, ಚಂದನ್ ಕಾಲೇಜು ವಿದ್ಯಾರ್ಥಿಯಾಗಿದ್ದ. ಅಪಘಾತ ಸಂಬಂಧ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.