ಬೆಂಗಳೂರು: ಸರ್ಕಾರ ನಿಗದಿಪಡಿಸಿರುವ ಸಮಯದಲ್ಲಿ ಕಚೇರಿಗೆ ಆಗಮಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಕಂದಾಯ ಇಲಾಖೆಯು ಅಧಿಕಾರಿಗಳು, ಸಿಬ್ಬಂದಿಗಳಿಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಶನಿವಾರ ಸೆ.16ರಂದು ಈ ಆದೇಶ ಹೊರಡಿಸಿದ್ದು, ನಿಗದಿತ ವೇಳೆಯಲ್ಲಿ ಕಚೇರಿಗೆ ಹಾಜರಾಗಬೇಕು ಇಲ್ಲದೆ ಹೋದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದ ಎಂದು ಎಚ್ಚರಿಕೆ ನೀಡಿದ್ದಾರೆ.
ಹಲವಾರು ಬಾರಿ ಕಂದಾಯ ಇಲಾಖೆಯ ಅಧೀನ ಶಾಖೆಗಳಿಗೆ ನಾನು ಖುದ್ದಾಗಿ ಪೂರ್ವಾಹ್ನ 10.45 ಗಂಟೆಗೆ ತಪಾಸಣೆಗೆಂದು ಭೇಟಿ ನೀಡಿದ್ದೆ. ಆಗ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗದಿರುವುದು, ಅಲ್ಲದೇ ಸಾಯಂಕಾಲ ಕಚೇರಿ ತುರ್ತು ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಕರೆದಾಗಲೂ ಕಚೇರಿಯಿಂದ ಅತೀ ಬೇಗ ನಿರ್ಗಮಿಸಿರುವುದು ಕಂಡು ಬಂದಿದೆ. ಇದರಿಂದಾಗಿ ಕಚೇರಿ ಕೆಲಸಕ್ಕೆ, ಅಡಚಣೆಯುಂಟಾಗುತ್ತಿದೆ.
ಅಲ್ಲದೇ, “ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಟಪಾಲು, ಕಡತ ಚಲನವಲನ ವಿಚಾರಣೆಗಾಗಿ ಬಂದಾಗ ವಿನಾಕಾರಣ ಅವರೊಂದಿಗೆ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೆ ಟೀ, ಕಾಫಿ, ಉಪಾಹಾರಕ್ಕೆಂದು ಕಚೇರಿ ಬಿಟ್ಟು ಹೋಗುವುದು, ಸಂತೆ ಬೀದಿಗಳಲ್ಲಿ ಓಡಾಡುತ್ತಿರುವುದು ಮುಂತಾದವುಗಳು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಂದಾಯ ಇಲಾಖೆಯ ಎಲ್ಲ ನೌಕಕರು ಪ್ರತಿ ದಿನ ಕಚೇರಿಗೆ ಪೂರ್ವಾಹ 10.30ರೊಳಗಾಗಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ಸಾಯಂಕಾಲ ಕಚೇರಿಯಿಂದ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ಟ ಜಂಟಿ, ಉಪ ಕಾರ್ಯದರ್ಶಿಯವರ ಅನುಮತಿ ಪಡೆದು ಕಚೇರಿಯಿಂದ ತೆರಳಬೇಕು ಎಂದು ಸ್ಪಷ್ಟವಾಗಿ ಕಟಾರಿಯಾ ತಿಳಿಸಿದ್ದಾರೆ.
ಅದಿಷ್ಟೇ ಅಲ್ಲದೆ ಈ ಸೂಚನೆಗಳನ್ನು ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಮ್ಮ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.