ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದಿನ ನಿತ್ಯವೂ ಏನಾದರೊಂದು ಸರ್ಕಸ್ ಮಾಡುತ್ತಲೇ ಇರುತ್ತೇವೆ. ಆದರೆ ಹೆಚ್ಚಿನವರಿಗೆ ನಾವು ಆರೋಗ್ಯವಾಗಿರಲು ಏನನ್ನು ಸೇವಿಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ದೇಹಕ್ಕೆ ಬೇಕಾದ ಪೋಷಕಾಂಶ ಸಿಗದೆ ಅನಾರೋಗ್ಯಕ್ಕೀಡಾಗುತ್ತಿದ್ದೇವೆ.
ಹಾಗೆನೋಡಿದರೆ ಮನುಷ್ಯನನ್ನು ಸೃಷ್ಟಿ ಮಾಡಿದ ದೇವರು ಅವನ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯ ಪೋಷಕಾಂಶಗಳನ್ನು ಪ್ರಕೃತಿ ಮೂಲಕ ನೀಡಿದ್ದಾನೆ. ನಾವು ದಿನ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳು ಒಂದಲ್ಲ ಒಂದು ಕಾರಣದಿಂದ ನಮ್ಮ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತಲೇ ಬಂದಿವೆ. ಆಹಾರ ತಜ್ಞರು ನಮ್ಮ ಸುತ್ತಮುತ್ತ ದೊರೆಯುವ ಹಣ್ಣು, ತರಕಾರಿ ಎಲ್ಲದರ ಬಗ್ಗೆ ಸಂಶೋಧಿಸಿ ಯಾವುದರಲ್ಲಿ ಏನೇನಿದೆ? ಯಾವುದಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿ ವೃದ್ಧಿಸಲು ಹೊಂದಿರುವ ಒಣ ಹಣ್ಣುಗಳ ಪೈಕಿ ಬಾದಾಮಿಯೂ ಒಂದಾಗಿದೆ. ಕೊಂಡುಕೊಳ್ಳುವಾಗ ದುಬಾರಿಯಾಗಿ ಕಂಡರೂ ಬೆಲೆಗೆ ತಕ್ಕ ಪೌಷ್ಟಿಕಾಂಶಗಳನ್ನು ದೇಹಕ್ಕೆ ಒದಗಿಸಿ ಆರೋಗ್ಯವನ್ನು ಕಾಪಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಬಾಯಿಗೆ ರುಚಿಯಾಗಿರುವ ಬಾದಾಮಿಯನ್ನು ಹಾಗೆಯೇ ಅಥವಾ ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು. ಇತರೆ ಖಾದ್ಯಗಳಿಗೂ ಬಳಸಬಹುದು. ಹೆಚ್ಚಿನವರಿಗೆ ಬಾದಾಮಿ ತಿಂದರೆ ಒಳ್ಳೆಯದು ಎಂದು ಮಾತ್ರ ಗೊತ್ತು. ಆದರೆ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ಆರೋಗ್ಯ ಎಂಬುವುದು ಗೊತ್ತಿಲ್ಲ. ಬಾದಾಮಿ ಆರೋಗ್ಯಕ್ಕೆ ಏಕೆ ಒಳ್ಳೆಯದೆಂದರೆ ಅದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಹೇರಳವಾಗಿವೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಇನ್ನು ಇದು ಓಮೆಗಾ 6 ಆಸಿಡ್ ಮಿಶ್ರಿತ ಕೊಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾದಾಮಿ ಎಣ್ಣೆಯನ್ನೂ ಬಳಸಬಹುದಾಗಿದೆ. ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಅತ್ಯುತ್ತಮ ಡಯಟ್ಗೂ ಸಹಕಾರಿ.
ಇನ್ನು ಬಾದಾಮಿಯನ್ನು ಸೇವಿಸುವುದರಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸುಗಮವಾಗುತ್ತದೆ. ರೈಬೋಪ್ಲೇವಿನ್ ಮತ್ತು ಎಲ್-ಕಾರ್ನಿಟೈನ್ ಎಂಬ ಪೌಷ್ಟಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ. ಆಂಟಿ-ಆಕ್ಸಿಡಾಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯುಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುತ್ತದೆ. ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮದುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ. ರಾತ್ರಿ ವೇಳೆ ಮೂರ್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು. LK