ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ನಡೆಸಲಾಗುವ ಏರ್ ಶೋಗೆ ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿರುವುದರಿಂದ ಮೂರು ವರ್ಷಗಳ ಬಳಿಕ ಈ ಬಾರಿಯ ದಸರಾದಲ್ಲಿ ಏರ್ ಶೋ ನಡೆಯುವುದು ಖಚಿತವಾಗಿದೆ.
ಈಗಾಗಲೇ ಏರ್ ಶೋ ನಡೆಸಲು ಅನುಕೂಲ ಸ್ಥಳವಾಗಿರುವ ಬನ್ನಿಮಂಟಪದ ಮೈದಾನಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಓಜಾ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಏರ್ ಶೋ ನಡೆಸುವ ಸ್ಧಳ, ದಿನಾಂಕ ಹಾಗೂ ಸಮಯ ಕುರಿತು ಚರ್ಚೆ ನಡೆಸಿದ್ದಾರೆ.
ಈ ಬಾರಿಯ ದಸರಾ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಏರ್ ಶೋಗೆ ಅವಕಾಶ ನೀಡುವಂತೆ ಕೇಂದ್ರದ ರಕ್ಷಣಾ ಇಲಾಖೆಗೂ ಪತ್ರ ಬರೆಯಲಾಗಿತ್ತು. ಅದರಂತೆ ರಾಜ್ಯದ ಪತ್ರಕ್ಕೆ ಸ್ಪಂದಿಸಿರುವ ರಕ್ಷಣಾ ಇಲಾಖೆ ಏರ್ ಶೋಗೆ ಸಮ್ಮತಿ ಸೂಚಿಸಿದೆ. ಆದರೆ ಏರ್ ಶೋ ಅಧಿಕೃತ ದಿನಾಂಕ ಇನ್ನಷ್ಟೆ ಘೋಷಣೆಯಾಗಬೇಕಾಗಿದೆ.
ಈ ಬಾರಿಯ ಏರ್ ಶೋನಲ್ಲಿ ಇಂಡಿಯನ್ ಏರ್‌ಫೋರ್ಸ್ ನ ಹೆಲಿಕಾಫ್ಟರ್‌ಗಳ ಪ್ರದರ್ಶನ, ಸ್ಕೈಡೈವಿಂಗ್ ಇನ್ನಿತರ ಪ್ರದರ್ಶನಗಳು ನಡೆಯಲಿವೆ. ಏರ್‌ಫೋರ್ಸ್ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ ನಂತರ ಏರ್ ಶೋ ಕಾರ್ಯಕ್ರಮದ ದಿನಾಂಕ, ಸ್ಥಳದ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2017ರಲ್ಲಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ 2019ರ ಅವಧಿಯಲ್ಲಿ ನಗರದ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ವಾಯುಪಡೆಯಿಂದ ವಿಶೇಷ ಏರ್ ಶೋ ನಡೆದಿತ್ತು. ಇದಾದ ಬಳಿಕ ಮೂರು ವರ್ಷಗಳ ಕಾಲ ಏರ್ ಶೋ ನಡೆದಿರಲಿಲ್ಲ. ಮೂರು ವರ್ಷಗಳ ಬಳಿಕ ನಡೆಯಲಿರುವ ಈ ಏರ್ ಶೋ ಜನರಲ್ಲಿ ಹುಮ್ಮಸ್ಸು ಮೂಡಿಸಿದೆ.
ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವ ದಸರಾ, ವಸ್ತುಪ್ರದರ್ಶನ ದಸರಾದೊಂದಿಗೆ ಏರ್ ಶೋ ಸೇರ್ಪಡೆಯಾಗಿರುವುದು ಖುಷಿಕೊಟ್ಟಿದ್ದು, ಆಗಸದಲ್ಲಿ ಚಿತ್ತಾರ ಬಿಡಿಸುವ ಲೋಹದ ಹಕ್ಕಿಗಳ ಹಾರಾಟವನ್ನು ನೋಡಲು ಎಲ್ಲರು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ಯಾವಾಗ ಎಲ್ಲಿ ನಡೆಯುತ್ತಿದೆ ಎಂಬುದರ ಅಧಿಕತ ಘೋಷಣೆಗಾಗಿ ಕಾಯುತ್ತಿದ್ದಾರೆ.