ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅ.15 ರಿಂದ 21 ರವರೆಗೆ ನಡೆಯುವ ನಾಡ ಕುಸ್ತಿ ನಡೆಯಲಿದ್ದು, ಈ ಬಾರಿ 220 ಜೋಡಿಗಳು ಗೆಲುವಿಗಾಗಿ ಅಖಾಡಕ್ಕಿಳಿಯಲಿವೆ.
ವಸ್ತುಪ್ರದರ್ಶನ ಆವರಣದ ಪಿ.ಕಾಂಳಿಂಗರಾವ್ ಗಾನ ಮಂಟಪದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಕುಸ್ತಿ ಪಟುಗಳಿಗೆ ಜತೆ ಕಟ್ಟುವ ಪ್ರಕ್ರಿಯೆಗೆ ನಡೆದು, ಹಿರಿಯ ಕುಸ್ತಿಪಟುಗಳು ಆಗಮಿಸಿದ ಕುಸ್ತಿಪಟುಗಳ ವಯಸ್ಸು, ತೂಕದ ಆಧಾರದಲ್ಲಿ 220 ಜೊತೆ(ಒಂದು ಜೋಡಿಗೆ ಇಬ್ಬರಂತೆ) ಕಟ್ಟಲಾಯಿತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಅಂದಾಜು ನೂರಕ್ಕೂ ಹೆಚ್ಚು ಮಂದಿ ಕುಸ್ತಿಪಟುಗಳು ಬಂದಿದ್ದರು.
ರಾಜ್ಯದ ನಾನಾ ಗರಡಿಗಳ 70ಕ್ಕೂ ಹೆಚ್ಚು ಮಂದಿ 17 ವರ್ಷದ ಒಳಪಟ್ಟ ಉದಯೋನ್ಮುಖ ಕುಸ್ತಿಪಟುಗಳು ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳಲು ಭಾಗವಹಿಸಿದ್ದು, 7 ದಿನಗಳ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತೀ ದಿನ 30 ಜೋಡಿಗಳಿಗೆ ಸ್ಪರ್ಧೆ ನಡೆಸಲಾಗುತ್ತದೆ.
ಅದರ ಆಧಾರದಲ್ಲಿ 220 ಜೋಡಿಗಳನ್ನು ಗುರುತಿಸಲಾಯಿತು. ಕೆಲ ಬಲಶಾಲಿ ಕುಸ್ತಿಪಟುಗಳಿಗೆ ನಾಡಕುಸ್ತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದ್ದರೂ ಅವರ ವಿರುದ್ಧ ಸೆಣೆಸಲು ಮತ್ತೊಬ್ಬ ಅಷ್ಟೇ ಸಾಮರ್ಥ್ಯದ ಕುಸ್ತಿ ಪಟು ಸಿಗದ ಹಿನ್ನಲೆಯಲ್ಲಿ ಅವರಿಗೆ ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದೇ ನಿರಾಶರಾದರು.
ನಾಡ ಕುಸ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸಾಹುಕಾರ ಚೆನ್ನಯ್ಯ ಕಪ್, ಮೇಯರ್ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಇದೇ ರೀತಿ, ಪಂಜ ಕುಸ್ತಿಘ, ಪಾಯಿಂಟ್, ಮಾರ್ಫಿಟ್ ಕುಸ್ತಿ ಪಂದ್ಯಗಳು ನಡೆಯಲಿವೆ.