ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಗಜಪಡೆಯ ತಾಲೀಮು ಮುಂದುವರೆದಿದ್ದು ಸೋಮವಾರ ಸಂಜೆ ಮಳೆಯ ನಡುವೆಯೇ ಮರದ ಅಂಬಾರಿಯ ತಾಲೀಮನ್ನು ನಡೆಸಲಾಯಿತು.
ದಸರಾ ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಯಿತು. ಸೋಮವಾರ ಸಂಜೆ 5 ಗಂಟೆಗೆ ಮರದ ಅಂಬಾರಿ ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, 4 ಗಂಟೆಯಿAದಲೇ ಶುರುವಾದ ಮಳೆ 6.30ರವರೆಗೂ ಸುರಿಯಿತು.
ಮಳೆ ನಿಂತ ಮೇಲೆ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ಮಳೆಯಲ್ಲಿಯೇ ತಾಲೀಮು ನಡೆಸಲಾಯಿತು. ಮಳೆಯ ನಡುವೆಯೂ ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750 ಕೆಜಿ ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದ. 280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಹೆಚ್ಚಿನ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದನು.
ಅಭಿಮನ್ಯು ಮರದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮಿ ವಿಜಯ ಸಾಥ್ ನೀಡಿದವು. ಗಂಡಾನೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ್, ಹೆಣ್ಣಾನೆಗಳಾದ ಲಕ್ಷ್ಮಿ, ಹಿರಣ್ಯಾ ಕೂಡ ಹಿಂದೆ ಹೆಜ್ಜೆ ಹಾಕಿ ಸಾಥ್ ನೀಡಿದವು.
ಇದಕ್ಕೂ ಮುನ್ನ ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯು ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು. ಬಳಿಕ ಅರ್ಚಕ ಪ್ರಹ್ಲಾದ್ ರಾವ್ ಗಜಪಡೆಗೆ ಪೂಜೆ ಸಲ್ಲಿಸಿದರು. ಆನೆಗಳ ಪಾದ ತೊಳೆಯಲಾಯಿತು.
ನಂತರ ಆನೆಗಳ ಪಾದದ ಬಳಿ ಕುಂಕುಮ, ಅರಿಸಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬೆನ್ನಿನ ಮೇಲೆ ನೂರಾರು ಕೆಜಿ ಭಾರ ಹೊತ್ತಿದ್ದರೂ ರಾಜಗಾಂಭೀರ್ಯದಿಂದ ವಿದ್ಯುತ್ ದೀಪದ ಬೆಳಕಿನಲ್ಲಿ ಹೆಜ್ಜೆ ಹಾಕಿದ. ಇದೇ ವೇಳೆ ರಾಜಪಥದಲ್ಲಿದ್ದ ನೂರಾರು ಮಂದಿ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡು ಖುಷಿ ಪಟ್ಟರು.