ಕೊಪ್ಪಳ: ಪ್ರತಿ ತಿಂಗಳು ಉತ್ತರ ಕರ್ನಾಟಕದಲ್ಲಿ ಆರೇಳು ದಿನ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಆರೇಳು ದಿನ ಪಕ್ಷ ಸಂಘಟನೆಗೆ ಕಾರ್ಯಕ್ರಮ ಮಾಡಲಾಗುವುದು. ರಾಜ್ಯದ ಪ್ರತಿಷ್ಠಿತ ಮಠಗಳಿಗೆ ತೆರಳಿ, ಪಕ್ಷದ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡಿ ಬೆಂಬಲ ಕೋರಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಕೊಪ್ಪಳ ಜೊಲ್ಲೆಯ ಗವಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿಯ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಪೃಥ್ವಿ ರೆಡ್ಡಿಯವರು ತಳಪಾಯ ಹಾಕಿದ್ದಾರೆ, ಉತ್ತರ ಕರ್ನಾಟಕದಲ್ಲಿ ಪಕ್ಷದ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ, ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಸ್ವಾತಂತ್ಯ್ರದ ನಂತರ ರಾಜ್ಯದಲ್ಲಿ ಮೂರು ಪಕ್ಷಗಳು ಕರ್ನಾಟಕದಲ್ಲಿ ಆಡಳಿತ ನಡೆಸಿವೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕ್ರಾಂತಿ ಮಾಡಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ರಾಜ್ಯದಲ್ಲಿ ಕೂಡ ಬಲಗೊಳಿಸಬೇಕು, ಕಳೆದ 10 ವರ್ಷಗಳಿಂದ ರಾಜ್ಯದ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ಪ್ರಯತ್ನ ಮಾಡಲಾಗುವುದು ಎಂದರು.
ಸ್ಥಳೀಯ ಚುನಾವಣೆಗಳಲ್ಲಿ ಸ್ವಂತ ಬಲದಿಂದ ಸ್ಪರ್ಧೆ: ಹೋರಾಟಗಾರರು, ಚಳವಳಿಗಾರರನ್ನು ಭೇಟಿಯಾಗಿ ಪಕ್ಷದ ಬಗ್ಗೆ ಅರಿವು ಮೂಡಿಸುವ ಮೂಲಕ ಪಕ್ಷ ಸಂಘಟನೆಗೆ ಪ್ರಯತ್ನಿಸಲಾಗುವುದು. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ವಂತ ಬಲದಿಂದ ಸ್ಪರ್ಧೆ ಮಾಡಲಿದೆ ಎಂದರು.
ಒಂದು ಗ್ರಾಮವನ್ನು ಆಯ್ಕೆ ಮಾಡಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸೇರಿಸಿ ಸಮಾಲೋಚನೆ ಮಾಡಲಾಗುವುದು. ಇಷ್ಟು ವರ್ಷ ಮೂರು ಪಕ್ಷಗಳು ಆಳಿದ್ದರು, ಇನ್ನೂ ಸಮಸ್ಯೆ ಯಾಕೆ ಇದೆ ಎಂದು ಜನರ ಜೊತೆ ಸಂವಾದ ನಡೆಸಿ, ಅರವಿಂದ್ ಕೇಜ್ರಿವಾಲ್ ಅವರ ಸಾಧನೆಗಳನ್ನು ತಿಳಿಸಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ರಾಜ್ಯವನ್ನು ಆಳಿದ ಮೂರು ಪಕ್ಷಗಳು ಕಾರಣ, ಇವರಿಗೆ ಜನರ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಈಗಲಾದರೂ ಸದನ ಕರೆದು ನೀರು ಬಿಡುವುದಿಲ್ಲ ಎಂದು ನಿರ್ಣಮ ಮಾಡಲಿ ಎಂದು ಒತ್ತಾಯ ಮಾಡಿದರು. ನೀರು ನಿಲ್ಲಿಸಿದರೆ ಬೆಂಬಲ ನೀಡುತ್ತೇವೆ ಎಂದರು.
ದೆಹಲಿ ಸಿಎಂ ಕೆಜ್ರಿವಾಲರವರ ಯೋಜನೆ ರಾಜ್ಯ ಸರಕಾರ ಕಾಪಿ ಮಾಡಿ ಜಾರಿಗೊಳಿಸಿ ಹಣ ಹೊಂದಿಸಲು ಒದ್ದಾಡುತ್ತಿದೆ. ಚಿಂತನೆ ಮಾಡದೆ ಯೋಜನೆ ಜಾರಿ ಮಾಡಿದ್ದು ಅವೈಜ್ಞಾನಿಕ. ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿಯನ್ನು ಕಿತ್ತು, ಉಚಿತ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗದೆ, ರಾಜ್ಯದ ರೈತರಿಗೆ 8 ಗಂಟೆ ಕೊಡುತ್ತಿದ್ದ ವಿದ್ಯುತ್ ಅನ್ನು 2 ಗಂಟೆಗೆ ಇಳಿಸಿ ಅವರ ಬದುಕಿನ ಜೊತೆ ಸರ್ಕಾರ ಆಟ ಆಡುತ್ತಿದೆ ಎಂದರು.
ಮೂಲಸೌಕರ್ಯ ಸಮರ್ಪಕವಾಗಿ ಕೊಡಿ: ಉತ್ತರ ಕರ್ನಾಟಕದ ನವಲಿ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲಾ ಸೇರೋಣ ಬನ್ನಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದೆ, ಎಲ್ಲಾ ಜನರಿಗೂ ನಾನು ಬಟ್ಟೆ ಹಾಕಲ್ಲ ಎಂದು ಗಾಂಧೀಜಿ ಹೋರಾಡಿದರು, ಅವರು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಇನ್ನೂ ಅತಂತ್ರವಾಗಿ ಬಾಳುತ್ತಿದ್ದೇವೆ ಎಂದರು.
ಎಲ್ಲರೂ ಮಾಜಿ ಮುಖ್ಯಮಂತ್ರಿಗಳಾಗುತ್ತಾರೆ, ನಾವಿಲ್ಲಿ ಮತ ಕೇಳಲು ಬಂದಿಲ್ಲ ಸರಿಯಾದ ವ್ಯಕ್ತಿಗೆ ಮತ ಹಾಕಿ ಎಂದು ಕೇಳಲು ಬಂದಿದ್ದೇನೆ ಎಂದರು.
ಮೂಲಸೌಕರ್ಯಗಳನ್ನು ಉಚಿತವಾಗಿ ಕೊಡುವುದು ಸರ್ಕಾರದ ಕರ್ತವ್ಯ, ಶಿಕ್ಷಣ, ಆರೋಗ್ಯ ಸೇವೆ ಉಚಿತವಾದರೆ ಉಳಿದದ್ದನ್ನು ಜನರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿ ರಾಜ್ಯಾಧ್ಯಕ್ಷರೊಂದಿಗೆ ಪಕ್ಷದ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿ ಗೌಡ ರಾಜ್ಯ ಉಪಾಧ್ಯಕ್ಷ ದುರ್ಗಯ್ಯ ನವಲಿ ಮಠ, ರಾಜ್ಯ ಕಾರ್ಯದರ್ಶಿ ಬಸವರಾಜ್ ಮುದಿಗೌಡರ್, ರವಿಕುಮಾರ್ ಸೇರಿದಂತೆ ಇನ್ನಿತರ ಜಿಲ್ಲಾ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.