ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಈ ಕೂಡಲೇ ರಾಜ್ಯದ ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ್ ಅವರ ರಾಜೀನಾಮೆ ಪಡೆಯ ಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಗ್ರಹಿಸಿದರು.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯದ ಮದುವೆ ಒಂದರಲ್ಲಿ ಕಂತೆ ಕಂತೆ ನೋಟುಗಳ ನಡುವೆ ನಡೆಸಿದ ದುಸ್ಸಾಹಸವು ಕರ್ನಾಟಕ ರಾಜ್ಯಕ್ಕೆ ಕಪ್ಪುಮಸಿ ಬಳಿಯುವಂತಿದೆ ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿ 70% ಹೆಚ್ಚು ತಾಲೂಕುಗಳು ಇಂದು ಬರಗಾಲಪೀಡಿತವಾಗಿ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಹಳ್ಳಿಗರೆಲ್ಲ ಬದುಕಿಗಾಗಿ ಗುಳೆ ಹೋಗುತ್ತಿರುವ ಈ ಕೆಟ್ಟ ಸಂದರ್ಭದಲ್ಲಿ ಉತ್ತರ ಕರ್ನಾಟಕದಿಂದಲೇ ಬಂದಿರುವ ಈ ಉದ್ದಟ ಮಂತ್ರಿಯ ಈ ವರ್ತನೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಹಲವು ಕಡೆ ಐಟಿ ದಾಳಿ ನಡಸಿದ್ದು, ಆ ವೇಳೆ ಅಕ್ರಮವಾಗಿ ನೂರಾರು ಕೋಟಿ ರೂಪಾಯಿ ಸಿಕ್ಕಿಬಿದ್ದು ಮುಂಬರುವ ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಪರಮ ಭ್ರಷ್ಟಾಚಾರದ ರೂಪದಲ್ಲಿ ಹಣದ ಅರಿವು ಬರುತ್ತಿದೆ ಎಂಬ ಕಪ್ಪು ಮಸಿ ಬಳಿದಿರುವಾಗ ಮಂತ್ರಿಗಳ ಈ ದುರ್ವರ್ತನೆ ನಿಜಕ್ಕೂ ಅಸಹ್ಯನೀಯ ಎಂದು ಹೇಳಿದರು.
ಇಂತಹ ಮಂತ್ರಿಗಳು ಒಂದು ಕ್ಷಣವೂ ಸಂಪುಟದಲ್ಲಿ ಮುಂದುವರಿಯಬಾರದು. ಇದು ಜನ ವಿರೋಧಿ ಸರ್ಕಾರವೆಂಬ ಅಣೆಪಟ್ಟಿ ಬರುವ ಮುಂಚೆ ಈ ಉದ್ಧಟ ಮಂತ್ರಿಯನ್ನು ಸಂಪಟದಿಂದ ಕಿತ್ತು ಹಾಕಬೇಕೆಂದು ಜಗದೀಶ್ ಒತ್ತಾಯಿಸಿದರು.