ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರಿಗೆ ಜುಲೈ 1-2023ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75ಕ್ಕೆ ಹೆಚ್ಚಿಸಿ ಅನುಷ್ಠಾನ ಗೊಳಿಸಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸಾರಿಗೆ ನಿಗಮಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಜುಲೈ 2023ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.
ಇನ್ನು ಇದೇ ನವೆಂಬರ್ ತಿಂಗಳ ವೇತನದಲ್ಲಿ ತುಟ್ಟಿಭತ್ಯೆ ಸೇರಿಸಿ ಪಾವತಿಸಲು ಆದೇಶ ನೀಡಿದ್ದು, ಜುಲೈನಿಂದ ಅಕ್ಟೋಬರ್ ವರೆಗಿನ ಅಂದರೆ 4 ತಿಂಗಳ ಡಿಎ ಹಿಂಬಾಕಿಯನ್ನು ಸಹೋದರ ಸಂಸ್ಥೆಗಳಾದ ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳು ತಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪಾವತಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರ ತನ್ನ ಉದ್ಯೋಗಿಗಳಿಗೆ 21 ಅಕ್ಟೋಬರ್ 2023ರಲ್ಲಿ ಶೇ.3.75 ರಷ್ಟು ತುಟ್ಟಿ ಭತ್ಯೆ (ಡಿಯರ್‌ನೆಸ್ ಅಲೋಯನ್ಸ್) ಹಾಗೂ ಡಿಯರ್‌ನೆಸ್ ರಿಲೀಫ್ ಹೆಚ್ಚಳ ಮಾಡಿದ್ದು ಜು.1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಹಣಕಾಸು ಇಲಾಖೆಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳವಾಗಿದ್ದು, ಇದನ್ನು ನವೆಂಬರ್ ವೇತನಕ್ಕೆ ಸೇರಿಸಿ ಪಾವತಿಸಲು ಆದೇಶ ನೀಡಿದ್ದಾರೆ.
ಜನವರಿಯಲ್ಲಿ ಆದ ಶೇ.4ರಷ್ಟು ಡಿಎ ಹೆಚ್ಚಳದ 7 ಹಿಂಬಾಕಿ ಇನ್ನೂ ಕೊಟ್ಟಿಲ್ಲ: 2023ರ ಜನವರಿ 1ರಿಂದ ಅನ್ವಯವಾಗುವಂತೆ ಮೇ 24ರಂದು ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿತ್ತು. ಅದೇ ರೀತಿ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದು, ಬಳಿಕ ಆಗಸ್ಟ್ ವೇತನದಲ್ಲಿ ಸೇರಿಸಲಾಗಿದೆ. ಆದರೆ 7 ತಿಂಗಳ ಡಿಎ ಹಿಂಬಾಕಿಯನ್ನು ಈವರೆಗೂ ಪಾವತಿಸಿಲ್ಲ. ಈ ಬಗ್ಗೆ ಯಾವುದೇ ನಿರ್ಧಾರವನ್ನು ನಿಗಮಗಳ ಅಧಿಕಾರಿಗಳು ತೆಗೆದುಕೊಂಡಿಲ್ಲ.
ಇನ್ನು ಈಗ ಜುಲೈ ತಿಂಗಳ ಡಿಎ ಹೆಚ್ಚಳವನ್ನು ನವೆಂಬರ್ ವೇತನದಲ್ಲಿ ಸೇರಿ ಕೊಡುವುದಕ್ಕೆ ಆದೇಶ ಮಾಡಲಾಗಿದೆ. ಜನವರಿ 7 ತಿಂಗಳ ಶೇ.4ರಷ್ಟು ಮತ್ತು ಜುಲೈನಿಂದ ಅನ್ವಯವಾಗುಂತೆ ಅಂದರೆ 4 ತಿಂಗಳುಗಳ ಶೆ.3.75 ರಷ್ಟು ಡಿಎ, ಒಟ್ಟಾರೆ 10 ತಿಂಗಳ ಡಿಎಯನ್ನು ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ನೀಡುವುದು ಬಾಕಿ ಇದೆ.