ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಜುಲೈ 2022ರಿಂದ ಜುಲೈ 2023ರವರೆಗೆ ಒಟ್ಟು 16 ತಿಂಗಳ ತುಟ್ಟಿ ಭತ್ಯೆ (DA) ಹಿಂಬಾಕಿಯನ್ನು ಈವರೆಗೂ ಬಿಡುಗಡೆ ಮಾಡಿಲ್ಲ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರವೂ ಕೂಡ ತನ್ನ ನೌಕರರಿಗೆ ಡಿಎ ಹೆಚ್ಚಳ ಮಾಡುತ್ತದೆ. ಅದೇ ರೀತಿ ಕಳೆದ 2022ರ ಜುಲೈನಲ್ಲಿ ಕೇಂದ್ರ ಸರ್ಕಾರ ಶೇ.4ರಷ್ಟು ಡಿಎ ಹೆಚ್ಚಳ ಮಾಡಿತ್ತು. ಬಳಿಕ ರಾಜ್ಯ ಸರ್ಕಾರ ಕೂಡ 2022ರ ಅಕ್ಟೋಬರ್ 7ರಂದು ಶೇ.3.75ರಷ್ಟು ಡಿಎ ಹೆಚ್ಚಳ ಮಾಡಿ ಅದು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಎಷ್ಟು ಹೆಚ್ಚಳವಾಗುತ್ತದೆಯೋ ಯಥಾಪ್ರಕಾರದಲ್ಲೇ ಸಾರಿಗೆ ನೌಕರರಿಗೂ ಡಿಎ ಅಷ್ಟೇ ಹೆಚ್ಚಳವಾಗುತ್ತದೆ. ಈ ಡಿಎ ಹೆಚ್ಚಳವನ್ನು ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಡಿಸೆಂಬರ್-2022ರ ವೇತನದಲ್ಲಿ ಸೇರಿಸಿದ್ದು, ಉಳಿದ 5 ತಿಂಗಳ ಡಿಎ ಹಿಂಬಾಕಿನ್ನು ಈವರೆಗೂ ನೀಡಿಲ್ಲ.
ಅದೇ ರೀತಿ 2023ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ತುಟ್ಟಿಭತ್ಯೆ ಹೆಚ್ಚಳವನ್ನು ಆಗಸ್ಟ್ ವೇತನದಲ್ಲಿ ಸಾರಿಗೆ ನೌಕರರಿಗೆ ಸೇರಿಸಲಾಗಿದ್ದು, ಇದರ 7 ತಿಂಗಳ ಹಿಂಬಾಕಿಯನ್ನು ಈವರೆಗೂ ಬಿಡುಗಡೆ ಮಾಡಿಲ್ಲ.
ಇನ್ನು ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಅದರಂತೆ ಸಾರಿಗೆ ನೌಕರರಿಗೆ ಇದೇ ನವೆಂಬರ್ 2023ರ ವೇತನದಲ್ಲಿ ಸೇರಿಸಿ ಕೊಡುವಂತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೂ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ನಡುವೆ ಈ ಡಿಎ ಹಿಂಬಾಕಿ ಕೊಡುವುದಕ್ಕೆ ಆಯಾಯ ನಿಗಮಗಳ ಆರ್ಥಿಕ ಪರಿಸ್ಥಿತಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಹೀಗಾಗಿ ಸಾರಿಗೆ ನೌಕರರಿಗೆ 2022ರ ಜುಲೈ ತುಟ್ಟಿಭತ್ಯೆಯ ಶೇ.3.75ರಷ್ಟು ಹೆಚ್ಚಳದ 5 ತಿಂಗಳುಗಳು, 2023ರ ಜನವರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳದ 7 ತಿಂಗಳುಗಳು ಮತ್ತು 2023ರ ಜುಲೈ ತುಟ್ಟಿಭತ್ಯೆ ಶೇ.3.75ರಷ್ಟು ಹೆಚ್ಚಳದ 4 ತಿಂಗಳುಗಳ ತುಟ್ಟಿಭತ್ಯೆ ಹಿಂಬಾಕಿಯನ್ನು ಅಂದರೆ ಒಟ್ಟು 16 ತಿಂಗಳುಗಳ ಹಿಂಬಾಕಿಯನ್ನು ಸಾರಿಗೆ ನೌಕರರಿಗೆ ಬಿಡುಗಡೆ ಮಾಡಬೇಕಿದೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಮ್ಮ ನಿಗಮಗಳು ಲಾಸ್ನಲ್ಲಿ ನಡೆಯುತ್ತಿವೆ ಜತೆಗೆ ಪ್ರಸ್ತುತ ಶಕ್ತಿ ಯೋಜನೆಯ ಟಿಕೆಟ್ ಮೌಲ್ಯದ ಹಣವನ್ನು ಸರ್ಕಾರ ಸರಿಯಾಗಿ ಬಿಡುಗೆ ಮಾಡದೆ ಕಡಿಮೆ ಹಣ ಬಿಡುಗಡೆ ಮಾಡುತ್ತಿರುವುದರಿಂದ ನೌಕರರಿಗೆ ಡಿಎ ಸೇರಿದಂತೆ ಇತರೆ ಭತ್ಯೆಗಳನ್ನು ಕೊಡುವುದಕ್ಕೆ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ಇನ್ನು ಸಾರಿಗೆ ನೌಕರರಿಗೆ ಬರಬೇಕಿರುವ 16 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯನ್ನು ಕೂಡಲೇ ಸಂಬಂಧಪಟ್ಟ ಆರ್ಥಿಕ ಇಲಾಖೆ ಆಧಿಕಾರಿಗಳು ಬಿಡುಗಡೆ ಮಾಡುವುದಕ್ಕೆ ಸರ್ಕಾರ ಮತ್ತು ಸಾರಿಗೆ ಸಚಿವರು ಆದೇಶ ಹೊರಡಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.