ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಇಂದು ಮಧ್ಯಾಹ್ನ ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ರಾತ್ರಿ ಬಿಡುಗಡೆ ಮಾಡಲಾಗಿದೆ. ಈ ನಡುವೆ ಬಂಧನ ಬಿಡುಗಡೆ ವಿಚಾರದಲ್ಲಿ ಸೋಮವಾರ ಭಾರೀ ಬೆಳವಣಿಗೆಯೇ ನಡೆದಿದೆ.
2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸುವಂತೆ ಇಂದು ಜಾಮೀನು ರಹಿತ ವಾರಂಟ್ ನೀಡಲಾಗಿತ್ತು. ಇದಕ್ಕೂ ಮುನ್ನಾ ಅಂದರೆ, ಶನಿವಾರ ಜೈಲಿನಿಂದ ರಿಲೀಸ್ ಆಗಿದ್ದರು. ಆದರೆ ಮತ್ತೆ ಇಂದು ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿತು.
ಈ ಬೆನ್ನಲ್ಲೇ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ದಾವಣಗೆರೆಗೆ ತೆರಳಿ ಶಿವಮೂರ್ತಿ ಶರಣರನ್ನು ಬಂಧಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾ. ಕೋಮಲಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.
ಶ್ರೀಗಳನ್ನು ಜೈಲಿಗೆ ಶಿಫ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಇತ್ತ ಹೈಕೋರ್ಟ್ನಲ್ಲಿ ಆರೋಪಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿತು. ಎರಡನೇ ಪ್ರಕರಣದ ತನಿಖೆಗೆ ಈಗಾಗಲೇ ಮಧ್ಯಂತರ ತಡೆಯಾಜ್ಞೆ ಪಡೆಯಲಾಗಿದೆ ಎಂಬುದನ್ನು ಆರೋಪಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.
ವಿಚಾರಣೆ ವೇಳೆ ಕೆಳ ನ್ಯಾಯಾಲಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಇದು ಹೇಗೆ ಸಾಧ್ಯ? ಹೈಕೋರ್ಟ್ ಕೆಲ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅದನ್ನು ಪಾಲಿಸಬೇಕಲ್ವಾ? ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುವುದಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿತು.
ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗೆ ಆದರೆ ನಾವು ಕ್ರಮಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಇದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಎಚ್ಚರಿಕೆ ನೀಡಿತು. ಚಿತ್ರದುರ್ಗ ಕೋರ್ಟ್ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್ ಕೂಡಲೇ ಆರೋಪಿಯನ್ನು ಬಿಡುಗಡೆ ಮಾಡಲು ಸೂಚಿಸಿತು. ಇಷ್ಟೆಲ್ಲ ಬೆಳವಣಿಗಳು ನಡೆಯುವ ಹೊತ್ತಿಗೆ ಸಂಜೆ ಆಗಿತ್ತು.
ಹೀಗಾಗಿ ಶಿವಮೂರ್ತಿ ಶರಣರನ್ನು ಜೈಲಿಗೆ ಹಾಕಲಾಗಿತ್ತು. ಬಳಿಕ ರಾತ್ರಿ 8.30ರ ವೇಳೆಗೆ ಮತ್ತೆ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಸದ್ಯ ಶರಣರು ಜೈಲಿನಿಂದ ಹೊರ ಬಂದಿದ್ದಾರೆ.